ಬೆಳಗಾವಿ : ಕಲುಷಿತ ನೀರು ಸೇವಿಸಿ ಐವತ್ತಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಶಿವಪ್ಪ ಯಂಡಿಗೇರಿ (75) ಎಂದು ಗುರುತಿಸಲಾಗಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ.
ಗ್ರಾಮದ ಬೋರ್ವೆಲ್ ನಿಂದ ಬರುವ ನೀರನ್ನು ಸುಮಾರು ಒಂದು ವಾರದಿಂದ ಗ್ರಾಮಸ್ಥರು ಸೇವಿಸಿದ್ದರಿಂದ ಎಲ್ಲರಿಗೂ ಏಕಕಾಲಕ್ಕೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ವಾಂತಿಭೇದಿ ಆರಂಭವಾಯಿತು ಎನ್ನಲಾಗಿದೆ. ಅಸ್ವಸ್ಥಗೊಂಡ ಜನರನ್ನು ತಾಲೂಕು ಸರಕಾರಿ ಆಸ್ಪತ್ರೆ, ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೋರ್ವೆಲ್ ನಿಂದ ಬರುವ ನೀರಿನ ಪೈಪ್ ಒಡೆದು, ಅದಕ್ಕೆ ಚರಂಡಿ ನೀರು ಸೇರಿಕೊಂಡಿದೆ. ಹಲವು ಭಾರಿ ಪಂಚಾಯತ್ ಪಿಡಿಒ ರವರ ಗಮನ ಸೆಳೆದರೂ ಯಾವುದೇ ದುರಸ್ತಿ ಮಾಡದ ಕಾರಣ ಈ ಘಟನೆ ನಡೆದಿದೆ. ಇದಕ್ಕೆ ಪಂಚಾಯತಿಯವರೇ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇತ್ತೀಚೆಗೆ ಕಲುಷಿತ ನೀರು ಕುಡಿದು ಗ್ರಾಮಗಳಲ್ಲಿ ಹಲವರು ಅಸ್ವಸ್ಥಗೊಳ್ಳುತ್ತಿರುವ ಘಟನೆಗಳು ಕಂಡು ಬರುತ್ತಿದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ.