ಡರ್ಬನ್: ದಕ್ಷಿಣ ಆಫ್ರಿಕದ ಕ್ವಾಜುಲಾ-ನಟಾಲ್ ನಲ್ಲಿ ಭಾರೀ ಪ್ರವಾಹಕ್ಕೆ ಸುಮಾರು 300 ಮಂದಿ ಮೃತಪಟ್ಟಿದ್ದು, ನೂರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಸತತ ಮಳೆಯಿಂದ ರಸ್ತೆ ಮತ್ತು ಸೇತುವೆಗಳು ಸಹ ಕೊಚ್ಚಿ ಹೋಗಿವೆ. ಆಫ್ರಿಕ ಖಂಡದ ಮುಖ್ಯ ಚಟುವಟಿಕೆ ಇರುವ ಬಂದರಿನಲ್ಲಿ ಸರಕು ಸಾಗಣೆಗೆ ಧಕ್ಕೆಯಾಗಿದ್ದು, ಹಡಗಿನಿಂದ ಬಂದರಿನಲ್ಲಿ ಇಳಿಸಿದ್ದ ಕೆಲ ಕಂಟೇನರ್ ಗಳು ಕೊಚ್ಚಿ ಹೋಗಿವೆ.
ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುತ್ತಲೂ ನೀರಿದ್ದರೂ ಶುದ್ಧ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನೀರು ಸರಬರಾಜು ಪೈಪ್ ಗಳು ಒಡೆದು ಹೋಗಿವೆ. ನೀರಿನ ಟ್ಯಾಂಕ್ ಗಳು ಮುರಿದುಬಿದ್ದಿವೆ. ವಿದ್ಯುತ್ ಕಂಬಗಳು ಕೊಚ್ಚಿ ಹೋಗಿವೆ. 262ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಸಹ ಕುಸಿದುಬಿದ್ದಿವೆ. ವಿದ್ಯಾಭ್ಯಾಸಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲು ಆಡಳಿತ ಪ್ರಯತ್ನಿಸುತ್ತಿದೆ. 18 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕರು ಸಹ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.
ದಕ್ಷಿಣಾ ಆಫ್ರಿಕಾದ ದಕ್ಷಿಣ ಪೂರ್ವ ಕರಾವಳಿಯು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಒಂದಲ್ಲ ಒಂದು ರೀತಿ ಎದುರಿಸುತ್ತಲೇ ಇದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬಿಗಡಾಯಿಸಬಹುದು ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.