ದುಬೈ: ಯುಎಇಯಲ್ಲಿನ ಗೋಲ್ಡನ್ ವೀಸಾ ನಿಯಮಗಳಲ್ಲಿ ಪ್ರಾಧಿಕಾರ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಭಾರತೀಯರು ದುಬೈ ಮತ್ತು ಇತರೆ ಎಮಿರೇಟ್ಸ್’ಗಳಲ್ಲಿ ಮನೆಗಳನ್ನು ಹುಡುಕುತ್ತಿದ್ದು, ಇದರಿಂದ ಐಷಾರಾಮಿ ನಿವಾಸಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ತಿಳಿಸಿದ್ದಾರೆ.
ಈ ಮಧ್ಯೆ ಹೆಚ್ಚಿನ ಬೇಡಿಕೆಯೊಂದಿಗೆ ಜನರನ್ನು ಆಕರ್ಷಿಸಲು ದುಬೈ ಡೆವಲಪರ್’ಗಳು ಹೊಸ ನಿಯಮಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಖರೀದಿದಾರರಿಗೆ ಅರಿವು ಮೂಡಿಸಲು ಭಾರತದಲ್ಲಿ ಪ್ರಾಪರ್ಟಿ ಎಕ್ಸ್’ಪೋಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ.
ಮನೆಯನ್ನು ಖರೀದಿಸುವುದು ಹೂಡಿಕೆ ಮಾಡುವ ಮತ್ತು ಗೋಲ್ಡನ್ ವೀಸಾವನ್ನು ಸುರಕ್ಷಿತಗೊಳಿಸುವ ಅತ್ಯಂತ ಸರಳ ಮಾರ್ಗವಾಗಿದೆ. ದುಬೈನಲ್ಲಿ ಯಾವುದೇ ಬಂಡವಾಳದ ಲಾಭದ ತೆರಿಗೆ ವಿಧಿಸಲಾಗುವುದಿಲ್ಲ. ಇದು ರಿಯಲ್ ಎಸ್ಟೇಟ್’ನಲ್ಲಿ ಹೂಡಿಕೆ ಮಾಡಲು ಪ್ರೇರೆಪಿಸುತ್ತದೆ ಎಂದು ಇಂಡಿಯಾ ಸೋಥೆಬೈಸ್ ಇಂಟರ್’ನ್ಯಾಷನಲ್ ರಿಯಾಲ್ಟಿಯ ಅಂತಾರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಆಕಾಶ್ ಪುರಿ ತಿಳಿಸಿದ್ದಾರೆ.
ಗೋಲ್ಡನ್ ವೀಸಾ ನಿಯಮಗಳಿಗೆ ಇತ್ತೀಚಿನ ಬದಲಾವಣೆಗಳು ಶ್ರೀಮಂತ ಭಾರತೀಯರನ್ನು ದೀರ್ಘಾವಧಿಗೆ ಅಲ್ಲಿ ನೆಲೆಸಲು ಮತ್ತು ದುಬೈನಲ್ಲಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದೆ.
ಎಮಿರೇಟ್ಸ್ ಒಬ್ಬ ವ್ಯಕ್ತಿ ಗೋಲ್ಡನ್ ವೀಸಾಗೆ ಅರ್ಹತೆ ಪಡೆಯಲು ಅಗತ್ಯವಿರುವ ಕನಿಷ್ಠ ಹೂಡಿಕೆಯನ್ನು 5 ಮಿಲಿಯನ್’ನಿಂದ 2 ಮಿಲಿಯನ್ ದಿರ್ಹಮ್ಸ್’ಗೆ ( ಸುಮಾರು 4.2 ಕೋಟಿ ರೂ.) ಇಳಿಸಿದೆ. ಅಲ್ಲದೆ ವೀಸಾ ಅವಧಿಯನ್ನು ಐದರಿಂದ 10 ವರ್ಷಗಳಿಗೆ ವಿಸ್ತರಿಸಿದೆ.
“2021 ರ ಅವಧಿಗೆ ಹೋಲಿಸಿದರೆ 2022 ರ ಮೊದಲಾರ್ಧದಲ್ಲಿ ಕನಿಷ್ಠ 10-15% ರಷ್ಟು ಏರಿಕೆಯಾಗಿದೆ. ಕಡಿಮೆ ಬೆಲೆಯಲ್ಲಿ ದುಬೈನಲ್ಲಿ ಐಷಾರಾಮಿ ಮನೆಗಳನ್ನು ಹೊಂದಲು ಜನರನ್ನು ಪ್ರೇರೆಪಿಸಿದೆ” ಎಂದು ಅನರಾಕ್ ಗ್ರೂಪ್ನ ಅಧ್ಯಕ್ಷ ಅನುಜ್ ಪುರಿ ಹೇಳಿದರು.