ಪ್ರಯಾಗರಾಜ್: ನಕಲಿ ಪ್ಲೇಟ್ಲೆಟ್ ಗಳು ಮತ್ತು ಪ್ಲಾಸ್ಮಾ ಮಾರಾಟದಲ್ಲಿ ತೊಡಗಿದ್ದ ಗ್ಯಾಂಗ್ ಅನ್ನು ಪೊಲೀಸರು ಶುಕ್ರವಾರ ಸಂಜೆ ಭೇದಿಸಿದ್ದು, 10 ಜನರನ್ನು ಬಂಧಿಸಿದ್ದಾರೆ.
ಗೋಬರ್ ಗಲ್ಲಿ ಎಸ್.ಆರ್.ಎನ್ ಆಸ್ಪತ್ರೆ ರಸ್ತೆಯ ಬಳಿ ಬಂಧಿತರಿಂದ ಒಟ್ಟು 18 ಪೌಚ್ ಪ್ಲಾಸ್ಮಾ, ನಕಲಿ ಪ್ಲೇಟ್ ಲೆಟ್ ಗಳ ಮೂರು ಪೌಚ್ ಗಳು, 1.02 ಲಕ್ಷ ರೂ.,13 ಮೊಬೈಲ್ ಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬ್ಲಡ್ ಬ್ಯಾಂಕ್ ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಪ್ಲೇಟ್ ಲೆಟ್ ಗಳಾಗಿ ಪರಿವರ್ತಿಸುತ್ತಿದ್ದರು. ಪ್ಯಾಕೆಟ್ ಗಳಲ್ಲಿ ನಿಜವಾಗಿಯೂ ಜ್ಯೂಸ್ ಇದೆಯೇ ಎಂಬುದು ಇನ್ನೂ ಸಾಬೀತಾಗಿಲ್ಲ. ಪ್ಲಾಸ್ಮಾ ಮತ್ತು ಪ್ಲೇಟ್ಲೆಟ್ ಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 17 ರಂದು 36 ವರ್ಷದ ಡೆಂಗ್ಯೂ ರೋಗಿಗೆ ಪ್ಲೇಟ್ಲೆಟ್ ಬದಲು ಮೂಸಂಬಿ ಜ್ಯೂಸ್ ಅನ್ನು ಡ್ರಿಪ್ ಮಾಡಿದ್ದರಿಂದ ರೋಗಿ ಸಾವನ್ನಪ್ಪಿದ್ದರು. ಅವರ ಕುಟುಂಬಸ್ಥರು ಆರೋಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಜಿಲ್ಲಾಡಳಿತವು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು.
ಡಿಸಿಎಂ ಮತ್ತು ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.