ಕಲ್ಲಡ್ಕ ಭಟ್ ನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಿ: ಪೊಲೀಸ್ ಆಯುಕ್ತರಿಗೆ ಮೊಹಿಯುದ್ದೀನ್ ಬಾವಾ ಅಭಿಮಾನಿ ಬಳಗ ಮನವಿ

Prasthutha|

ಮಂಗಳೂರು: ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಶ್ಲೀಲವಾಗಿ ಮಾತನಾಡಿದ್ದು, ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಿ ಎಂದು ಮೊಹಿಯುದ್ದೀನ್ ಬಾವಾ ಅಭಿಮಾನಿಗಳ ಬಳಗದ ಅಧ್ಯಕ್ಷ ಉಮೇಶ್ ದಂಡಕೇರಿ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರಿಗೆ ಮನವಿಯನ್ನು ನೀಡಲಾಯಿತು.

- Advertisement -

ಈ ಸಂದರ್ಭ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ಮೊಹಿಯುದ್ದೀನ್ ಬಾವಾ ಅಭಿಮಾನಿಗಳ ಬಳಗದ ಉಪಾಧ್ಯಕ್ಷ ಮೊಹಮ್ಮದ್ ಕುಂಜತ್ ಬೈಲ್, ಮಾಜಿ ಮೇಯರ್ ಕೆ.ಆಶ್ರಫ್, ಕಾರ್ಯದರ್ಶಿ ಜೋಸೆಫ್ ಬೊಂದೆಲ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ ಉಪಸ್ಥಿತರಿದ್ದರು.

ಮನವಿ ನೀಡಿದ ಬಳಿಕ ಮಾತನಾಡಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ, ನಮಗೆ ಶಾಂತಿ, ನ್ಯಾಯ ಕೊಡಿ ಹಾಗೂ ಅನೈತಿಕ ಪೊಲೀಸ್ ಗಿರಿ ವಿರುದ್ಧ ಕ್ರಮಕೈಗೊಳ್ಳಿ ಎಂದು ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ ಕಲ್ಲಡ್ಕ ಭಟ್ ನನ್ನು ಬಂಧಿಸಲ್ಲ ಎಂದು ಸರ್ಕಾರ ಹೇಳಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.

- Advertisement -

ಕಲ್ಲಡ್ಕ ಭಟ್ ಅವರನ್ನು ಬಂಧಿಸಿದರೆ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ ಎಂದರೆ ಸರ್ಕಾರ ಯಾಕೆ ಇರುವುದು. ಪೊಲೀಸ್ ಇಲಾಖೆ ಯಾಕೆ ಇರುವುದು ಎಂದು ಪ್ರಶ್ನಿಸಿದ್ದಾರೆ.

ಮೊಹಿಯುದ್ದೀನ್ ಬಾವಾ ಅಭಿಮಾನಿ ಬಳಗ ನೀಡಿದ ಮನವಿ ಪತ್ರದಲ್ಲಿ

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 24/12/2023 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯಕ್ರಮವೊಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ” ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ, ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ ಎಂದು ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ 26/12/2023 ರಂದು ಅಪರಾಧ – 0263/2023, 354, 294, 509, 506, 153 ಎ, 295, 295 ಎ, 298 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಈ ಹಿಂದೆಯೂ ಕೂಡ ಇದೇ ರೀತಿಯಲ್ಲಿ ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆಸಲು ಕುಮ್ಮಕ್ಕು ನೀಡುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದು, ಆದ ಕಾರಣ ಈಗ ದಾಖಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಭಾವನೆಗಳು ವ್ಯಕ್ತವಾಗುತ್ತಿದೆ.

ಭಾರತ ದೇಶದಲ್ಲಿ ಹೆಣ್ಣನ್ನು ದೇವರೆಂದು ಪೂಜಿಸುವ ಸಂಸ್ಕೃತಿ ಮೊದಲಿನಿಂದಲೂ ನಡೆದು ಬಂದಿದೆ, ಈ ರೀತಿಯ ಪ್ರಚೋದನೆಯ ಹೇಳಿಕೆಯನ್ನು ನೀಡುವ ಮೂಲಕ ಸಮಸ್ತ ಹೆಣ್ಣು ಕುಲಕ್ಕೆ ಅವಮಾನ ಮಾಡಿರುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಸರ್ಕಾರ ಬಂಧಿಸುವುದಿಲ್ಲ ಎಂಬ ಹೇಳಿಕೆಯನ್ನು ಸರ್ಕಾರದ ಪರವಾದ ಅಡ್ವಕೇಟ್ ಅವರು ನ್ಯಾಯಾಲಯಕ್ಕೆ ನಿನ್ನೆಯ ದಿನ ತಿಳಿಸುವ ಮೂಲಕ ಕ್ರಿಮಿನಲ್ ಪ್ರಕರಣದ ಆರೋಪಿಯನ್ನು ಬಂಧಿಸುವುದಿಲ್ಲ ಎಂಬ ಸರ್ಕಾರದ ನಿರ್ಧಾರ ಕಾನೂನಿನಲ್ಲಿ ಸಾಮಾನ್ಯ ಜನರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ರೀತಿಯ ನ್ಯಾಯ ಎಂಬ ತಪ್ಪು ಭಾವನೆ ಮೂಡಲು ಕಾರಣವಾಗಿದೆ. ಆರೋಪಿಯನ್ನು ಈ ಕೂಡಲೇ ಬಂಧಿಸಿ ವಿಚಾರಣೆ ನಡೆಸಿ ಆರೋಪಿಯ ಮೇಲೆ ರೌಡಿ ಶೀಟ್ ತೆರೆಯುವ ಮೂಲಕ ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಪೋಲಿಸ್ ಇಲಾಖೆ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಭಾರತದ ಕಾನೂನಿನ ಅನ್ವಯ ಪೊಲೀಸ್ ಇಲಾಖೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿರುವ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಎಲ್ಲಾ ಆರೋಪಿಗಳ ರೀತಿಯಲ್ಲಿ ಕ್ರಮ ಕೈಗೊಂಡು ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯಲು ಪ್ರಚೋದನೆ ನೀಡುತ್ತಿರುವ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.

Join Whatsapp