ಬಡತನ ಸಮಸ್ಯೆ: 10 ತಿಂಗಳ ಮಗುವನ್ನು 85 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಾಯಿ !

Prasthutha|

ಚೆನ್ನೈ: ಲಾಕ್ಡೌನ್ ಕಾರಣದಿಂದಾಗಿ ತೀವ್ರ ಬಡತನಕ್ಕೆ ಸಿಲುಕಿದ್ದ ದಂಪತಿ, ತಮ್ಮ 10 ತಿಂಗಳು ಪ್ರಾಯದ ಮಗುವನ್ನು ಆಂಧ್ರ ಮೂಲದ ದಂಪತಿಗೆ 85 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ತಮಿಳುನಾಡಿನ ಕಣ್ಣಗಿ ಎಂಬಲ್ಲಿ ನಡೆದಿದೆ. ಆದರೆ ಘಟನೆ ಬೆಳಕಿಗೆ ಬರುತ್ತಲೇ ಮಗುವಿನ ತಂದೆ-ತಾಯಿ ಹಾಗೂ ಮಧ್ಯವರ್ತಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಅಟೋ ಚಾಲಕನಾಗಿ ದುಡಿಯುತ್ತಿದ್ದ ಚಿನ್ನದುರೈ (35)  ಲಾಕ್ಡೌನ್’ನಿಂದಾಗಿ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಮನೆಯಲ್ಲಿ ತೀವ್ರ ಬಡತನ ಎದುರಾದ ಹಿನ್ನಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ (30) ಜೊತೆ ಸಮಲೋಚನೆ ನಡೆಸಿ ತಮ್ಮ 10 ತಿಂಗಳು ಪ್ರಾಯದ ಮಗು ಮುತ್ತುರಾಜ್’ನನ್ನ ಮಾರಾಟ ಮಾಡುವ ನಿರ್ಧಾರ ಮಾಡಿದ್ದರು. ಇದಕ್ಕಾಗಿ ಮಧ್ಯವರ್ತಿ ತಂಗಂ ಎಂಬಾಕೆಯನ್ನು ಸಂಪರ್ಕಿಸಿದ್ದರು. ಮಗುವನ್ನು ಮಾರಾಟ ಮಾಡಿಕೊಡಲು ಒಪ್ಪಿಕೊಂಡ ತಂಗಂ 85 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಳು. ಹೆಚ್ಚಿನ ಮೊತ್ತ ನೀಡಬೇಕು ಎಂದು ಚಿನ್ನದುರೈ- ವಿಜಯಲಕ್ಷ್ಮಿ  ಬೇಡಿಕೆ ಇಟ್ಟಿದ್ದರು. ಆದರೆ ತಾನು ಮಾಡುತ್ತಿರುವುದು ಕಾನೂನುಬಾಹಿರ ಹಾಗೂ ಹೆಚ್ಚಿನ ರಿಸ್ಕ್ ಇರುವ ಕೆಲಸ ಎಂದು ತಂಗಂ ಹೇಳಿದ ಕಾರಣ 85 ಸಾವಿರ ರೂಪಾಯಿಗೆ ಮಗುವನ್ನು ನೀಡಿದ್ದರು. ಮಗು ಕಾಣದೇ ಇದ್ದಾಗ ಪ್ರಶ್ನಿಸಿದವರ ಬಳಿ, ತಮ್ಮ ಅಜ್ಜಿ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ಹೇಳಿ ನಂಬಿಸಿದ್ದರು.

ಚಿನ್ನದುರೈ- ವಿಜಯಲಕ್ಷ್ಮಿ  ದಂಪತಿಯಿಂದ 85 ಸಾವಿರ ರೂಪಾಯಿಗೆ ಪಡೆದ ಮಗುವನ್ನು ಮಧ್ಯವರ್ತಿ ತಂಗಂ, ಆಂಧ್ರ ಪ್ರದೇಶದ ನವನೀತಮ್-ಪಾಂಡುರಂಗ ದಂಪತಿಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಳು. ಮಗು ಕಾಣೆಯಾದ ಕುರಿತು ಮಾಹಿತಿ ಪಡೆದ ಮಹಿಳಾ ಆಯೋಗದ ಅಧಿಕಾರಿ ಲಲಿತಾ, ರೆಡ್ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಮಗು ಆಂಧ್ರ ಪ್ರದೇಶದಲ್ಲಿರುವ ಕುರಿತು ಮಾಹಿತಿ ಸಿಕ್ಕಿದ್ದು, ಬಳಿಕ ಅಲ್ಲಿಗೆ ತೆರಳಿ ಮಗುವನ್ನು ಕರೆತರಲಾಗಿದೆ.



Join Whatsapp