ಪಂದ್ಯ ಶ್ರೇಷ್ಠ ಬಹುಮಾನ ಮೊತ್ತವನ್ನು ಮೈದಾನದ ಸಿಬ್ಬಂದಿಗೆ ನೀಡಿದ ಮೊಹಮ್ಮದ್ ಸಿರಾಜ್

Prasthutha|

ಕೊಲಂಬೋ: ಏಷ್ಯಾಕಪ್​ನ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕರಾರುವಾಕ್ ದಾಳಿ ಮೂಲಕ ಮಿಂಚಿದ್ದರು. ಈ ಅದ್ಭುತ ಪ್ರದರ್ಶನಕ್ಕೆ ಲಭಿಸಿದ ಪ್ರಶಸ್ತಿ ಮೊತ್ತವನ್ನು ಇದೀಗ ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು.

- Advertisement -

ಆದರೆ ಟೀಮ್ ಇಂಡಿಯಾ ಬೌಲರ್​ಗಳ ಮಿಂಚಿನ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲುವಲ್ಲಿ ಶ್ರೀಲಂಕಾ ಬ್ಯಾಟರ್​ಗಳು ಪರದಾಡಿದರು. ಅದರಲ್ಲೂ ಮೊಹಮ್ಮದ್ ಸಿರಾಜ್ 4ನೇ ಓವರ್​ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡಕ್ಕೆ ಆಘಾತ ನೀಡಿದರು.

ಇದರ ಬೆನ್ನಲ್ಲೇ ದಸುನ್ ಶಾನಕ ರನ್ನು ಕ್ಲೀನ್ ಬೌಲ್ಡ್ ಮಾಡಿದ ಸಿರಾಜ್ 5 ವಿಕೆಟ್​ಗಳ ಸಾಧನೆ ಮಾಡಿದರು. ಆ ಬಳಿಕ ಕುಸಾಲ್ ಮೆಂಡಿಸ್​ಗೂ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಕೇವಲ 7 ಓವರ್​ಗಳಲ್ಲಿ 21 ರನ್ ನೀಡಿ 6 ವಿಕೆಟ್ ಉರುಳಿಸಿದರು.

- Advertisement -

ಸಿರಾಜ್ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಕೇವಲ 50 ರನ್​ಗಳಿಗೆ ಆಲೌಟ್ ಆಯಿತು. ಅಲ್ಲದೆ 51 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6.1 ಓವರ್​ಗಳಲ್ಲಿ ಟಾರ್ಗೆಟ್ ತಲುಪುವ ಮೂಲಕ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಸಿರಾಜ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಆದರೆ ತನಗೆ ಸಿಕ್ಕಿದ 5 ಸಾವಿರ ಡಾಲರ್ ಪ್ರಶಸ್ತಿ ಮೊತ್ತವನ್ನು ಸಿರಾಜ್ ಕೊಲಂಬೊದ ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದರು.

ವೀಡಿಯೋ ವೀಕ್ಷಿಸಿ…

ಈ ಬಗ್ಗೆ ಮಾತನಾಡಿದ ಸಿರಾಜ್, ಮೈದಾನದ ಸಿಬ್ಬಂದಿಗಳು ಇರದಿದ್ದರೆ ಈ ಟೂರ್ನಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ನಗದು ಬಹುಮಾನ ಅವರಿಗೆ ಸಲ್ಲಬೇಕು. ಇದನ್ನು ನಾನು ಅವರಿಗೆ ನೀಡುತ್ತೇನೆ ಎಂದು ತಿಳಿಸಿದರು. ಇದೀಗ ಮೊಹಮ್ಮದ್ ಸಿರಾಜ್ ಅವರ ಮಾನವೀಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

50 ಸಾವಿರ ಡಾಲರ್ ನೀಡಿದ ಎಸಿಸಿ:

ಈ ಬಾರಿಯ ಏಷ್ಯಾಕಪ್​ ಸೂಪರ್-4 ಪಂದ್ಯಗಳು ಮಳೆಯ ಕಾರಣ ನಡೆಯುವುದು ಅನುಮಾನ ಎನ್ನಲಾಗಿತ್ತು. ಆದರೆ ಮೈದಾನ ಸಿಬ್ಬಂದಿಗಳ ಸತತ ಪರಿಶ್ರಮದ ಫಲವಾಗಿ ಎಲ್ಲಾ ಪಂದ್ಯಗಳು ನಿಗದಿಯಂತೆ ನಡೆಸಲು ಸಾಧ್ಯವಾಗಿದೆ. ಈ ಪರಿಶ್ರಮಕ್ಕೆ ಫಲವಾಗಿ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮೈದಾನದ ಸಿಬ್ಬಂದಿಗಳಿಗೆ  ಮತ್ತು ಪಿಚ್ ಕ್ಯುರೇಟರ್‌ಗಳಿಗೆ 50000  ಯುಎಸ್​ ಡಾಲರ್​ ನಗದು ಬಹುಮಾನವನ್ನು ನೀಡಿದೆ.