ದುಬೈ: ಪಾಕಿಸ್ತಾನ ವಿರುದ್ಧದ ಟ್ವೆಂಟಿ -20 ವಿಶ್ವಕಪ್ ಪಂದ್ಯದಲ್ಲಿ ನಿರಾಶಾದಾಯಕ ಸೋಲಿನ ನಂತರ ಕಿಡಿಗೇಡಿ ನೆಟ್ಟಿಗರಿಂದ ಅವಮಾನಕ್ಕೊಳಗಾದ ಭಾರತೀಯ ವೇಗಿ ಮೊಹಮ್ಮದ್ ಶಮಿಗೆ ಅನೇಕ ಕ್ರಿಕೆಟ್ ದಿಗ್ಗಜರು ಬೆಂಬಲಕ್ಕೆ ನಿಂತಿದ್ದಾರೆ.
ಶಮಿ ಅವರ ದೇಶಭಕ್ತಿಯನ್ನೇ ಪ್ರಶ್ನಿಸುವ ರೀತಿಯಲ್ಲಿ ಸೈಬರ್ ಮಿಡತೆಗಳು ದಾಳಿಗೆ ಮುಂದಾಗಿದ್ದು, ಇದರ ಬೆನ್ನಲ್ಲೇ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಶಮಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ನಿಜಕ್ಕೂ ಆಘಾತವಾಗಿದೆ. ನಾವು
ಮೊಹಮ್ಮದ್ ಶಮಿ ಪರವಾಗಿ ನಿಲ್ಲುತ್ತೇವೆ. ಶಮಿ ಒರ್ವ ಚಾಂಪಿಯನ್ ಬೌಲರ್. ಭಾರತ ತಂಡದ ಕ್ಯಾಪ್ ಧರಿಸಿದ ಆಟಗಾರ, ಭಾರತವನ್ನು ಅತಿಯಾಗಿ ಪ್ರೀತಿಸುತ್ತಾನೆ ಸಾಮಾಜಿಕ ಜಾಲತಾಣದಲ್ಲಿನ ದಾಳಿಕೋರರಿಗಿಂತ ದೇಶದ ಮೇಲೆ ಹೆಚ್ಚು ಪ್ರೀತಿ ಭಾರತೀಯ ಆಟಗಾರನಿಗಿದೆ. ನಾವು ಶಮಿ ಪರ ಇದ್ದೇವೆ. ಮುಂದಿನ ಪಂದ್ಯದಲ್ಲಿ ಜಲ್ವಾ ತೋರಿಸಿ” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
“ನಾನು ಕೂಡ ಭಾರತ ಹಾಗೂ ಪಾಕಿಸ್ತಾನ ಹೋರಾಟದ ಭಾಗವಾಗಿದ್ದೆ. ನಾವು ಕೂಡ ಸೋತಿದ್ದೇವೆ. ಆದರೆ ಪಾಕಿಸ್ತಾನಕ್ಕೆ ಹೋಗಲು ಯಾವತ್ತೂ ಹೇಳಿರಲಿಲ್ಲ. ನಾನು ಕೆಲ ವರ್ಷಗಳ ಹಿಂದಿನ ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ.
ಈ ಹೇಯ ರೀತಿಯ ಟೀಕೆಗಳು ನಿಲ್ಲಬೇಕು” ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ
ಹರ್ಭಜನ್ ಸಿಂಗ್ ಟ್ವೀಟ್ ಮಾಡಿ “ವಿ ಲವ್ಯೂ ” ಎಂದು ಬರೆದ ಬಳಿಕ ಶಮಿ ಅಕೌಂಟ್ ಟ್ಯಾಗ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಶಮಿಗೆ ಬೆಂಬಲಕ್ಕೆ ನಿಂತಿದ್ದಾರೆ.
ಶಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಧ್ವೇಷಪೂರಿತ ಅಭಿಯಾನಕ್ಕೆ ಟೀಮ್ ಇಂಡಿಯಾದ ಅಭಿಮಾನಿಗಳು ತಕ್ಕ ರೀತಿಯಲ್ಲೇ ತಿರುಗೇಟು ನೀಡುತ್ತಿದ್ದು, ಶಮಿ ಬೆಂಬಲಕ್ಕೆ ನಿಂತಿದ್ದಾರೆ