ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ವಿಚಾರ ವಿವಾದ ಸೃಷ್ಟಿಸಿದೆ. ದೇಶದಲ್ಲಿ ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೊಳಿಸುವ ಅಗತ್ಯವಿದೆ ಎಂದು ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರತಿಪಾದಿಸಿದನ್ನು ವಿರೋಧ ಪಕ್ಷಗಳು ಖಂಡಿಸಿದ್ದು, ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ನಾವು ‘ಕೋಮುವಾದಿ ನಾಗರಿಕ ಸಂಹಿತೆ’ ಹೊಂದಿದ್ದೇವೆ ಎಂಬ ಪ್ರಧಾನಿ ಹೇಳಿಕೆ ಡಾ.ಅಂಬೇಡ್ಕರ್ ಅವರಿಗೆ ಮಾಡಿದ ಭಾರೀ ಅವಮಾನ. ಅಂಬೇಡ್ಕರ್ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ಬಯಸಿದ್ದರು. 1950ರಲ್ಲಿ ಅವರ ಆಶಯ ಈಡೇರಿತ್ತು. ಆದರೆ ಈ ಸುಧಾರಣೆಗಳನ್ನು ಆರ್‌ಎಸ್‌ಎಸ್ ಹಾಗೂ ಜನಸಂಘ ಬಲವಾಗಿ ವಿರೋಧಿಸಿದ್ದವು ಎಂದಿದ್ದಾರೆ. ಇದೀಗ ಅಂಬೇಡ್ಕರ್ ಸಿದ್ಧಾಂತವನ್ನು ಕೋಮುವಾದಿ ಎಂದು ಮೋದಿ ಹೇಳುತ್ತಾ ನಿಜವಾದ ಕೋಮುವಾದವನ್ನು, ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನು ಮೂಡಿಸುತ್ತಿದ್ದಾರೆ ಎಂದಿದ್ದಾರೆ.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಚರ್ಚೆ ಹುಟ್ಟು ಹಾಕುವ ಮೂಲಕ ಸಮಾಜದಲ್ಲಿನ ಸಾಮರಸ್ಯ ಕೆಡಿಸುವುದು ಮೋದಿ ಅವರ ಏಕೈಕ ಗುರಿ. ಈ ಸಂಹಿತೆ ಜಾರಿ ಆರ್‌ಎಸ್‌ಎಸ್‌ನ ಕಾರ್ಯಸೂಚಿಯೂ ಆಗಿದೆ. ಮೋದಿ ಅವರಿಗೆ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವುದೊಂದೇ ಗೊತ್ತಿದೆ ಎಂದಿದ್ದಾರೆ.
ಸಿಪಿಐ ಪ್ರಧಾನ ಕಾರ್ಯದರ್ಶಿ ರಾಜಾ, ಇದು ‘ಜಾತ್ಯತೀತ’ ಸಂವಿಧಾನದ ಮೇಲೆ ಬಿಜೆಪಿ ನಡೆಸುತ್ತಿರುವ ದಾಳಿ. ಜನರಿಗೆ ಸ್ಫೂರ್ತಿ ನೀಡುವ ವಿಷಯಗಳು ಮೋದಿ ಅವರಲ್ಲಿ ಇಲ್ಲ. ಹೀಗಾಗಿಯೇ ಅವರು ಕೋಮುವಾದಿ ಕಾರ್ಯಸೂಚಿ ಮೊರೆ ಹೋಗಿದ್ದಾರೆ. ಅವರು ಮಾತನಾಡುವುದೆಲ್ಲ ಆರ್‌ಎಸ್‌ಎಸ್‌ನ ವಿಭಜಕ ಕಾರ್ಯಸೂಚಿಗೆ ಅನುಗುಣವಾಗಿ ಹಾಗೂ ದುರುದ್ದೇಶದಿಂದ ಕೂಡಿರುತ್ತದೆ ಎಂದಿದ್ದಾರೆ.
ಆರ್‌ಜೆಡಿ ಸಂಸದ ಮನೋಜ್ ಝಾ, ಇತ್ತೀಚಿನ ಚುನಾವಣೆಗಳ ಪ್ರಚಾರ ವೇಳೆ ‘ಮಂಗಳಸೂತ್ರ’ ಹಾಗೂ ಇಸ್ಲಾಂ ಕುರಿತು ಭಯ ಹುಟ್ಟಿಸುವಂತಹ ಹೇಳಿಕೆಗಳನ್ನು ನೀಡಿದ್ದ ಮೋದಿ ಅವರು ಈಗ ‘ಜಾತ್ಯತೀತ ನಾಗರಿಕ ಸಂಹಿತೆ’ ಕುರಿತು ಮಾತನಾಡಿದ್ದಾರೆ. ಜಾತ್ಯತೀತತೆ ಎಂಬುದು ಒಂದು ಪ್ರಕ್ರಿಯೆ ಹಾಗೂ ಅದನ್ನು ಮೈಗೂಡಿಸಿಕೊಳ್ಳಬೇಕು. ತಮ್ಮ ಸಂಕುಚಿತ ಮನೋಭಾವದಿಂದಾಗಿ ಪ್ರತಿ ಬಾರಿಯೂ ಮೋದಿ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸುತ್ತಿದ್ದಾರೆ ಎಂದಿದ್ದಾರೆ.