ಇಂದು ಅಬುಧಾಬಿಯಲ್ಲಿ ದೇವಸ್ಥಾನ ಉದ್ಘಾಟಿಸಲಿರುವ ಮೋದಿ

Prasthutha|

ಯುಎಇ: ಅರಬ್ ಎಮಿರೇಟ್ಸ್‍ನಲ್ಲಿ ನಿರ್ಮಿಸಿರುವ ಮೊಟ್ಟಮೊದಲ ಹಿಂದೂ ದೇವಾಲಯವನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.ಈ ದೇವಸ್ಥಾನವು 27 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ ಎನ್ನಲಾಗಿದ್ದು, ಅಬುಧಾಬಿಯ ಅಬು ಮುರೇಖಾ ಜಿಲ್ಲೆಯಲ್ಲಿದೆ.

- Advertisement -

ಎರಡು ದಿನಗಳ ಯುಎಇ ಮತ್ತು ಖತರ್ ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ‌ ಮೋದಿ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಜೊತೆಗೆ ನಿನ್ನೆ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಕುರಿತು ವ್ಯಾಪಕ ಮಾತುಕತೆ ನಡೆಸಿದ್ದಾರೆ. ಬಳಿಕ ಉಭಯ ಮುಖಂಡರಿಂದ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ಈ ಎರಡು ದಿನಗಳ ಭೇಟಿಯು 2015 ರಿಂದ ಯುಎಇಗೆ ಪ್ರಧಾನಿ ನರೇಂದ್ರ ಮೋದಿಯವರ ಏಳನೇ ಭೇಟಿ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಭೇಟಿಯಾಗಿದೆ.

ಉಭಯ ಮುಖಂಡರ ಸಭೆಯ ಬಳಿಕ ಸಹಿ ಹಾಕಲಾದ ದ್ವಿಪಕ್ಷೀಯ ಒಪ್ಪಂದಗಳು

- Advertisement -
  • ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ.
  • ವಿದ್ಯುತ್ ಅಂತರ್ ಸಂಪರ್ಕ ಮತ್ತು ಮತ್ತು ವ್ಯಾಪಾರ ಒಪ್ಪಂದ.
  • ಭಾರತ- ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಲ್ಲಿ ಅಂತರ್ ಸರಕಾರಿ ಚೌಕಟ್ಟಿನ ಒಪ್ಪಂದ.
  • ಡಿಜಿಟಲ್ ಮೂಲಸೌಕರ್ಯ ಯೋಜನೆಗಳಲ್ಲಿ ಸಹಕಾರ ಒಪ್ಪಂದ.
  • ಪಾರಂಪರಿಕ ಕೇಂದ್ರ ಮತ್ತು ಮ್ಯೂಸಿಯಂಗಳ ಕ್ಷೇತ್ರದಲ್ಲಿ ಒಪ್ಪಂದ.
  • ತ್ವರಿತ ಪಾವತಿ ವೇದಿಕೆಗಳ ಪರಸ್ಪರ ಸಂಪರ್ಕ ಒಪ್ಪಂದ(ಭಾರತದಲ್ಲಿ ಯುಪಿಐ; ಯುಎಇಯಲ್ಲಿ ಎಎಎನ್‍ಐ)

ಯುಎಇ ಅಧ್ಯಕ್ಷರನ್ನು ಹೊಗಳಿದ ನರೇಂದ್ರ ಮೋದಿ

ಅಬುಧಾಬಿಯಲ್ಲಿ ಹಿಂದು ದೇವಾಲಯದ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಯುಎಇ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಭಾರತದೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಯುಎಇ ಸರಕಾರದ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಮೋದಿ ಯುಎಇ‌ ಅಧ್ಯಕ್ಷರನ್ನು ಪ್ರಶಂಸಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ನೀಡಿದ ಬೆಂಬಲವನ್ನು ಸ್ಮರಿಸಿಕೊಳ್ಳುತ್ತಾ, 2015ರಲ್ಲಿ ನಾನು ನಿಮ್ಮೆಲ್ಲರ ಪರವಾಗಿ ಒಂದು ಬೇಡಿಕೆಯನ್ನು ಮುಂದಿಟ್ಟಿದ್ದೆ. ಅಬುಧಾಬಿಯಲ್ಲಿ ಒಂದು ದೇವಸ್ಥಾನ ಕಟ್ಟಲು ಸಾಧ್ಯವಾಗಬಹುದೇ ಎಂದು ಅವರನ್ನು ಕೇಳಿದ್ದೆ. ಅವರು ಒಂದು ನಿಮಿಷ ಕೂಡ ಯೋಚನೆ ಮಾಡದೇ ಖಂಡಿತವಾಗಿಯೂ ಕಟ್ಟೋಣ ಎಂದು ಹೇಳಿದ್ದರು. ಅದರೊಂದಿಗೆ ನೀವು ಯಾವ ಪ್ರದೇಶವನ್ನು ತೋರಿಸಿ ಅಲ್ಲಿ ಒಂದು ಗರೆ ಎಳೆಯುತ್ತೀರೋ ಅದೇ ಪ್ರದೇಶದಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದಿದ್ದರು ಎಂದು ಮೋದಿ ಹೇಳಿದ್ದಾರೆ.

ನನಗೆ ಖಂಡಿತವಾಗಿಯೂ ಗೊತ್ತಿದೆ. ಇಲ್ಲಿರುವ ಭಾರತೀಯ ಉದ್ಯೋಗಿಗಳನ್ನು ಯುಎಇ ಅಧ್ಯಕ್ಷರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು‌ ನನಗೆ ಚೆನ್ನಾಗಿ ಗೊತ್ತಿದೆ ಎಂದು ಮೋದಿ ನಿನ್ನೆಯ ಕಾರ್ಯಕ್ರಮದಲ್ಲಿ ಹೇಳಿದ್ದರು.

Join Whatsapp