ಬೆಂಗಳೂರು: ಪ್ರಧಾನಿ ಮೋದಿ ಅವರಿಂದ ಕರ್ನಾಟಕದ ಜನರಿಗೆ ತೀವ್ರ ಅನ್ಯಾಯ, ಅಗೌರವ ಆಗಿದೆ. ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಲೂಟಿ ಮಾಡುತ್ತಿದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆಲ್ಲ ಮೋದಿ ಅವರು ಪರವಾನಗಿ ಕೊಟ್ಟವರಂತೆ ಸುಮ್ಮನಿದ್ದರೆ ಹೇಗೆ? ಅವರು ಇದಕ್ಕೆಲ್ಲಾ ಉತ್ತರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಹಾಗೂ ನಂತರದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದ ಪ್ರವಾಹ ಬಂತು, ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಜನರಿಗೆ ಸಾಂತ್ವನ ಹೇಳಿಲ್ಲ, ವಿಶೇಷ ಅನುದಾನ ನೀಡುವ ಕೆಲಸ ಮಾಡಿಲ್ಲ. ಇದರ ಜೊತೆಗೆ ರಾಜ್ಯಕ್ಕೆ ಯಾವೆಲ್ಲಾ ಅನ್ಯಾಯ ಆಗಿದೆ, ಜನದ್ರೋಹ ಆಗಿದೆ ಎಂದು ತಮಗೆಲ್ಲ ಗೊತ್ತಿದೆ ಎಂದು ಹೇಳಿದರು.
ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಇಂದು ಆ ಹೆಸರನ್ನೇ ಮೋದಿ ಅವರು ಅಳಿಸಿ ಹಾಕಿದ್ದಾರೆ. ಕರಾವಳಿಯಲ್ಲಿ 1906 ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಆರಂಭವಾಯಿತು. ಹಾಜಿ ಅಬ್ದುಲ್ಲ ಎಂಬುವವರು ಸ್ಥಾಪನೆ ಮಾಡಿದ್ದು, ಸಿಂಡಿಕೇಟ್ ಬ್ಯಾಂಕ್ ಟಿ.ಎಂ.ಎ ಪೈ ಅವರಿಂದ ಸ್ಥಾಪನೆಯಾಗಿದ್ದು, ವಿಜಯಾ ಬ್ಯಾಂಕ್ ನಮ್ಮ ರಾಜ್ಯದ್ದು, ಈ ಬ್ಯಾಂಕುಗಳು ಈಗ ಇದೆಯಾ? ಈ 4 ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡಿದ್ದು ಯಾರು? ಈ ಬ್ಯಾಂಕುಗಳ ಒಟ್ಟು ಆಸ್ತಿ ರೂ. 317 ಲಕ್ಷ ಕೋಟಿ ಇತ್ತು. 75,000 ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿತ್ತು. ಈ 4 ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದವು. ಇವು ಬೇರೆ ಬ್ಯಾಂಕುಗಳೊಂದಿಗೆ ವಿಲೀನವಾದ ನಂತರ ಇವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯಾ? ಇದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಬೇರೆ ಬ್ಯಾಂಕುಗಳು ದಿವಾಳಿಯಾಗಿವೆ ಎಂದು ವಿಲೀನ ಮಾಡಿದ್ದರಿಂದ ಕನ್ನಡಿಗರಿಗೆ ಕೆಲಸ ಸಿಗದಂತಾಗಿದೆ. ಇದು ನಮ್ಮ ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕೊರೊನಾ ರೋಗ ಬಂದಾಗ ಆಮ್ಲಜನಕ ಕೊಡಲಿಲ್ಲ. ಆ ನಂತರ ಕರ್ನಾಟಕ ಹೈಕೋರ್ಟ್ ನವರು ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಆದೇಶ ಮಾಡಿದ ಮೇಲೆ ಹೈಕೋರ್ಟ್ ಹೇಳಿದಷ್ಟು ಆಮ್ಲಜನಕ ಪೂರೈಕೆ ಮಾಡಲು ಆಗಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತು. ಆಮ್ಲಜನಕ ಸಿಗದೆ ರಾಜ್ಯದಲ್ಲಿ ಬಹಳ ಮಂದಿ ಸತ್ತು ಹೋದರು. ಇದಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ ಒಂದು ಉದಾಹರಣೆ. ಕೇಂದ್ರ ಸಚಿವರು ಸಂಸತ್ತಿಗೆ ಉತ್ತರ ನೀಡುವಾಗ ಆಮ್ಲಜನಕ ಸಿಗದೆ ದೇಶದಲ್ಲಿ ಒಬ್ಬರು ಸತ್ತಿಲ್ಲ ಎಂದು ಸುಳ್ಳು ಹೇಳಿದರು. ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ. ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿ ಅವರು ಪ್ರಧಾನಿಯಾದ ಮೇಲೆ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್ ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11.ಲಕ್ಷ ಕೋಟಿ ಉಳಿದಿದ್ದು ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹಿರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಮ್ಮ ಸಾಧನೆ. ಅದನ್ನೂ ತಮ್ಮದೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕೇಂದ್ರದ ಹಣಕಾಸು ಸಚಿವರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು. 14ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗದ ನಡುವೆ 1.07% ನಮ್ಮ ಪಾಲು ಕಡಿಮೆಯಾಯಿತು. ಇದು ಆದದ್ದು ನರೇಂದ್ರ ಮೋದಿ ಅವರ ಕಾಲದಲ್ಲಿ. ಹಾಗಾಗಿ 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ನಿರ್ಮಾಲ ಸೀತಾರಾಮನ್ ಅವರು ಇದನ್ನು ತಿರಸ್ಕಾರ ಮಾಡಿದ್ದರಿಂದ ನಮ್ಮ ರಾಜ್ಯಕ್ಕೆ ಸಿಗಲಿಲ್ಲ. ಇದಕ್ಕೆ ಯಾರು ಕಾರಣ? ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವಲ್ಲವೇ? ಎಂದು ವಿಪಕ್ಷ ನಾಯಕ ಪ್ರಶ್ನಿಸಿದರು.
ಇಷ್ಟೆಲ್ಲ ಅನ್ಯಾಯ ಮಾಡಿ ಈಗ ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗುತ್ತಿಗೆ ಕೆಲಸಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ರು, ಅದಕ್ಕೆ ಮೋದಿ ಅವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಈಗ ಮೋದಿ ಅವರು ಕರ್ನಾಟಕದ ಜನರಿಗೆ ಉತ್ತರ ಹೇಳಬೇಕು. ಪತ್ರ ಬರೆದಿದ್ದು 7/6/2021 ರಲ್ಲಿ, ಇದಾಗಿ ಒಂದು ವರ್ಷ ಆಗಿದೆ. ನಾನು ಚೌಕಿದಾರ್, ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಈ ವರೆಗೆ ಕ್ರಮ ಕೈಗೊಂಡಿಲ್ಲ? ಇದಕ್ಕೆಲ್ಲ ರಾಜ್ಯದ ಜನರಿಗೆ ಉತ್ತರ ಕೊಡಬೇಕೋ ಬೇಡವೋ? ಎಂದು ಪ್ರಶ್ನಿಸಿದರು.
ಸಬ್ ಅರ್ಬನ್ ರೈಲು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನಂತ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದರು, ಅಂದಿನಿಂದಲೂ ಹೇಳಿಕೊಂಡು ಬರ್ತಿದ್ದಾರೆ. ಆದರೆ ಕೆಲಸ ಆರಂಭ ಆಗಿಲ್ಲ, ಈಗ ಮಾಡ್ತಿದ್ದೀವಿ ಎಂದು ಹೇಳ್ತಿದ್ದಾರೆ. ಮೋದಿ ಅವರಿಂದ ಕರ್ನಾಟಕದ ಜನರಿಗೆ ಅನ್ಯಾಯ, ಅಗೌರವ ಆಗಿದೆ. ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಲೂಟಿ ಮಾಡುತ್ತಿದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆಲ್ಲ ಮೋದಿ ಅವರು ಪರವಾನಗಿ ಕೊಟ್ಟವರಂತೆ ಸುಮ್ಮನಿದ್ರೆ ಹೇಗೆ? ಉತ್ತರ ಕೊಡಬೇಕಲ್ವಾ? ಪ್ರಧಾನಿಗಳು ನಮ್ಮ ರಾಜ್ಯಕ್ಕೆ ಬರಬಾರದು ಎಂದು ನಾನು ಹೇಳಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಷ್ಟೇ ನಾನು ಕೇಳುತ್ತಿರೋದು. ಆಡಳಿತ ಪಕ್ಷವನ್ನು ಪ್ರಶ್ನಿಸೋದು ನಮ್ಮ ಕರ್ತವ್ಯ. ಉತ್ತರ ಕೋಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಅಗ್ನಿಪಥ್ ಯೋಜನೆಯಡಿ ಯುವಕರನ್ನು ಕೇವಲ 4 ವರ್ಷಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ತೀವಿ ಎಂದು ಸರ್ಕಾರ ಹೇಳುತ್ತಿದೆ. 4 ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ, ಆಮೇಲೆ ನಮ್ಮ ಭವಿಷ್ಯವೇನು ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಸೈನ್ಯ ಸೇರಲು ಯುವಕರು 10ನೇ ತರಗತಿ ಪಾಸ್ ಆಗಿರಬೇಕು ಎಂದು ಇದೆ, ಸೈನ್ಯದಲ್ಲಿ 4 ವರ್ಷ ಕೆಲಸ ಮಾಡಬಹುದು, ಅದು ಮುಗಿದ ಮೇಲೆ ಅವರನ್ನು ಕೆಲಸದಿಂದ ತೆಗೆಯಲಾಗುತ್ತೆ. ಆಗ ಅವರು ಶಿಕ್ಷಣವನ್ನು ಮುಂದುವರೆಸಲು ಆಗಿರಲ್ಲ, ಪಿಂಚಣಿಯೂ ಸಿಗಲ್ಲ. ಇದು ಬಹಳ ಅವೈಜ್ಞಾನಿಕವಾಗಿದೆ ಹಾಗಾಗಿ ಯುವ ಜನರು ಈ ಯೋಜನೆ ಬೇಡ ಎಂದು ಹೇಳ್ತಿದ್ದಾರೆ. ಆದರೆ ಸರ್ಕಾರ ನಾವು ಇದನ್ನು ಮಾಡಿಯೇ ಮಾಡ್ತೀವಿ ಎಂದು ಹಠ ಹಿಡಿದು ಕೂತಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ.
ಯುವಕರ ಮುಖ್ಯ ಬೇಡಿಕೆ ನಾಲ್ಕು ವರ್ಷದ ನಂತರ ನಾವು ನಿರುದ್ಯೋಗಿ ಆಗುತ್ತೇವೆ, ನಮಗೆ ಪಿಂಚಣಿ ಕೂಡ ಸಿಗಲ್ಲ ಎಂಬುದು. ನನ್ನ ಪ್ರಕಾರ ಇದು ನ್ಯಾಯಯುತ ಬೇಡಿಕೆ. ಯೋಜನೆ ಕೈಬಿಡಬೇಕು, ಸರ್ಕಾರ ಯಾಕೆ ಹಠ ಹಿಡಿದು ಕೂತಿರುವುದು? ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಆರಂಭವಾದ ನಂತರದಿಂದ ಮೀಸಲಾತಿ ಎಲ್ಲಿ ಸಿಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಜನರಿಗೂ ಮೀಸಲಾತಿ ಕೊಡಲು ಆರಂಭವಾದ ಮೇಲೆ ಮೀಸಲಾತಿಯ ಅರ್ಥವೇ ಹೊರಟು ಹೋಗಿದೆ. ನಿರುದ್ಯೋಗವನ್ನು ಹೆಚ್ಚು ಮಾಡುವುದು ಸರ್ಕಾರದ ಉದ್ದೇಶ ಅನ್ನಿಸುತ್ತೆ. ಅಗ್ನಿಪಥ್ ವಿರುದ್ಧದ ಯುವಕರ ಹೋರಾಟ ನ್ಯಾಯಯುತವಾಗಿದೆ ಎಂದು ನಾವು ಬೆಂಬಲ ನೀಡಿದ್ದೇವೆ, ಆದರೆ ಈ ಹೋರಾಟವನ್ನು ಹಿಂಸಾತ್ಮಕವಾಗಿ ನಡೆಸಬಾರದು. ಶಾಂತಿಯಿಂದ ಹೋರಾಟ ಮಾಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಅಂಬೇಡ್ಕರ್ ಅವರ 125ನೇ ಜಯಂತಿ ಆಚರಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಮಂಜೂರು ಮಾಡಿದ್ದು, ಜಾಗ, ಅನುದಾನ ನೀಡಿದ್ದು ನಾನು. ಬೆಂಗಳೂರು – ಮೈಸೂರು ಹೆದ್ದಾರಿಯನ್ನು ತಾನೇ ಮಾಡಿಸಿದ್ದು ಎಂದು ಪ್ರತಾಪ್ ಸಿಂಹ ಬಹಳ ಸಲ ಹೇಳಿದ್ದಾರೆ. ವಾಸ್ತವವೆಂದರೆ ನಾನು ಮುಖ್ಯಮಂತ್ರಿಯಾಗಿದ್ದೆ, ಮಹದೇವಪ್ಪನವರು ಸಚಿವರಾಗಿದ್ದರು, ಆಗ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಭೂಸಾರಿಗೆ ಸಚಿವರಾಗಿದ್ದರು. ರಾಜ್ಯ ಹೆದ್ದಾರಿಯಾಗಿದ್ದ ಮೈಸೂರು – ಬೆಂಗಳೂರು ಹೆದ್ದಾರಿಯನ್ನು 10 ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದನೆ ಮಾಡಿಕೊಟ್ಟವರು ಆಸ್ಕರ್ ಫರ್ನಾಂಡೀಸ್. ಯೋಜನೆ ಅನುಮೋದನೆಯೇ ಆಗದಿದ್ದರೆ ಈ ಸರ್ಕಾರ ಕೆಲಸ ಮಾಡುತ್ತಿತ್ತಾ? ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಡಾಕ್ಟರ್ ಆಫ್ ಸೈನ್ಸ್ ಓದಿದ್ದರು. ಇದಕ್ಕಾಗಿ ಅವರ 125ನೇ ಹುಟ್ಟು ಹಬ್ಬದ ಸ್ಮರಣಾರ್ಥ ನಮ್ಮ ಸರ್ಕಾರ ಕರ್ನಾಟಕದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆ ಮಾಡಿದ್ದು.ನರೇಂದ್ರ ಮೋದಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದೇನೆ, ಅವುಗಳಿಗೆ ಉತ್ತರ ಕೊಡುತ್ತಾರೆ ಎಂಬ ಆಶಾ ಭಾವನೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.