ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೊ ವಿಜ್ಞಾನಿಗಳನ್ನು ಸನ್ಮಾನಿಸಲು ಆಗಮಿಸಿದಾಗ ನಮ್ಮ ಬಿಜೆಪಿ ನಾಯಕರು ಸಾರ್ವಜನಿಕರೊಂದಿಗೆ ನಿಂತು ಮಾದರಿಯ ನಡೆ ಅನುಸರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

- Advertisement -

ಭಾನುವಾರ ಶೋಭಾ ನಾಗಸಂದ್ರ ಅಪಾರ್ಟ್‌ಮೆಂಟ್‌ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಯಾನ-3 ಯಶಸ್ವಿ ಉಡಾವಣೆಗೆ ಕಾರಣರಾದ ವಿಜ್ಞಾನಿಗಳಿಗೆ ಸನ್ಮಾನ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪ್ರಧಾನಿಯವರ ಶಿಷ್ಟಾಚಾರ ಪಾಲನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ರಸ್ತೆಯ ಮಧ್ಯೆ ಜನರ ಜೊತೆ ನಿಂತು ಕೈ ಬೀಸಿರುವುದಕ್ಕೆ ಕಾಂಗ್ರೆಸ್ ಟೀಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್ ಪಾಲನೆಯಲ್ಲಿ ಯಾವುದೇ ಗೊಂದಲ ಇರಲಿಲ್ಲ. ನಾವೆಲ್ಲಾ ಸಾರ್ವಜನಿಕ ಜೀವನಕ್ಕೆ ಬಂದಿರುವುದು ಸೇವೆ ಮಾಡಲು. ಇಸ್ರೋದಂತಹ ಸಂಸ್ಥೆ, ವಿಜ್ಞಾನಿಗಳು ಇಂತಹ ದೊಡ್ಡ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿದು ಅವರಿಗೆ ಮಹತ್ವ ಕೊಡಬೇಕು. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಮ್ಮ ನಾಯಕರು ಇದ್ದು ಆ ಕೆಲಸ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳುವ, ಹೊಗಳುವ ಮನಸುಗಳು ಬೇಕಷ್ಟೇ ಎಂದರು.

- Advertisement -

ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತನಾಡಿ ಸಾಧನೆಗೆ ಕಾರಣರಾದವರಿಗೆ ಮುಂದೆ ಬಿಟ್ಟರು. ಇದರ ಅರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತಲ್ಲ. ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.

ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಮ್ಮ ನಾಯಕರು ನಿಂತಿದ್ದಾರೆ. ನಮ್ಮ ನಾಯಕರು ಅತ್ಯಂತ ಮಾದರಿಯಾದ ಅನುಕರಣೀಯ ನಡವಳಿಕೆ ತೋರಿದ್ದಾರೆ. ಇವತ್ತಿನ ದಿನ ಎಲ್ಲರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡುತ್ತಾರೆ. ನಮ್ಮ ನಾಯಕರು ಅತ್ಯಂತ ಅನುಕರಣೀಯ ಮಾದರಿ ಅನುಸರಿಸಿದ್ದಾರೆ. ಬಿಜೆಪಿ ನಾಯಕರು ಬೀದಿ ಪಾಲಾದರು, ಬ್ಯಾರಿಕೇಡ್ ಬಂಧಿ ಆದರು ಅಂತ ಕಾಂಗ್ರೆಸ್‌ನವರು ಹೇಳಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

Join Whatsapp