ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ನೀಡಿದ ಶಾಸಕ ಝಮೀರ್ ಅಹ್ಮದ್

Prasthutha|

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಶಾಸಕ, ಮಾಜಿ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಪಾದರಾಯನಪುರ ವಾರ್ಡಿನ ಗೋರಿಪಾಳ್ಯದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳು ಹಾಗೂ ಇಬ್ಬರು ವಿಕಲ ಚೇತನರಿಗೆ ವಿಶೇಷ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

- Advertisement -

ಇದೇ ವೇಳೆ, ನಮಗೆ ವಾಹನ ಬೇಡ, ಬದಲಾಗಿ ಶಾಲೆಯ ಶುಲ್ಕ ಪಾವತಿಸಲು ನೆರವು ನೀಡಿ ಎಂದು ಮನವಿ ಮಾಡಿದ ಹಲವು ವಿದ್ಯಾರ್ಥಿಗಳಿಗೆ ತಲಾ 50,000 ರೂ. ಗಳಂತೆ ಆರ್ಥಿಕ ನೆರವು ನೀಡಿದರು. ಈ ಪೈಕಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಗಳಿಸಿರುವ ವೈಷ್ಣವಿ ಎಂಬ ವಿದ್ಯಾರ್ಥಿನಿಗೆ 80 ಸಾವಿರ ರೂ. ಧನ ಸಹಾಯದ ಜೊತೆಗೆ ದ್ವಿಚಕ್ರ ವಾಹನವನ್ನೂ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನನಗೆ ಭಗವಂತ ಅಧಿಕಾರ, ಐಶ್ವರ್ಯ, ನಿಮ್ಮೆಲ್ಲರ ಅಪಾರ ಪ್ರೀತಿ ಅಭಿಮಾನ ಕರುಣಿಸಿದ್ದಾನೆ. ಆದರೆ, ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕೊರಗು ಯಾವಾಗಲೂ ನನ್ನನ್ನು ಕಾಡುತ್ತಿರುತ್ತದೆ. ಹಾಗಾಗಿ, ನನ್ನ ಕ್ಷೇತ್ರದ ವಿದ್ಯಾರ್ಥಿಗಳ ವಿಚಾರದಲ್ಲಿ ಹಾಗಾಗಬಾರದು. ಅವರ ಶಿಕ್ಷಣಕ್ಕೆ ಅಗತ್ಯವಾದ ನೆರವನ್ನು ನಾನು ನೀಡುತ್ತಲೇ ಬಂದಿದ್ದೇನೆ. ಮುಂದೆಯೂ ನೀಡುತ್ತೇನೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ಸಂಗತಿ. ಪ್ರತಿವರ್ಷ ನನ್ನ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿ, ಕೈಲಾದ ನೆರವು ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.



Join Whatsapp