ಬೆಂಗಳೂರು: ವಿಧಾನ ಸಭಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಕಾಂಗ್ರೆಸ್‌ನ ಹಿರಿಯ ತಲೆಗಳು ನಿರಾಕರಿಸಿದ ಕಾರಣ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ರನ್ನು ಕಾಂಗ್ರೆಸ್ ಹೆಸರಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯು.ಟಿ ಖಾದರ್ ಅವರು ಕರ್ನಾಟಕದ ಸ್ಪೀಕರ್ ಹುದ್ದೆ ಏರಿದ ಮೊದಲ ಮುಸ್ಲಿಂ ಮುಖಂಡರಾಗಿದ್ದಾರೆ.
ಖಾದರ್ ಅವರು ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು.
ನಾಮ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಯು.ಟಿ ಖಾದರ್, ಸಂವಿಧಾನ ಬದ್ಧವಾದ ಹುದ್ದೆಯನ್ನು ಪಕ್ಷದ ಹೈಕಮಾಂಡ್ ನೀಡಿದೆ. ಅತ್ಯಂತ ಸಂತೋಷದಿಂದ ಈ ಹುದ್ದೆಯನ್ನು ಒಪ್ಪಿದ್ದೇನೆ. ಗೌರವಯುತವಾದ ಸ್ಥಾನಕ್ಕೆ ಗೌರವ ತಂದು ಕೊಡುತ್ತೇನೆ ಎಂದರು.
ಸಚಿವ ಸ್ಥಾನ ಯಾರಿಗೂ ಬೇಕಾದರೂ ಆಗಬಹುದು. ಆದರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಆಡಳಿತ ಹಾಗೂ ಪ್ರತಿಪಕ್ಷದ ಸಹಕಾರ ಪಡೆದುಕೊಂಡು ಪ್ರೀತಿಯಿಂದ, ಪಾರದರ್ಶಕವಾಗಿ ಸಭೆಯನ್ನು ನಡೆಸಿಕೊಂಡು ಹೋಗುತ್ತೇನೆ ಎಂದರು.