ಬೆಂಗಳೂರು: ಡಿಸಿಸಿ ಬ್ಯಾಂಕಿನಲ್ಲಿ ನಮ್ಮ ಶಾಸಕರೇ ಪಡೆದ 245 ಕೋಟಿ ರೂ. ಸಾಲದಲ್ಲಿ ಒಂದು ರೂಪಾಯಿಯು ಕಟ್ಟಿಲ್ಲ ಎಂದು ವಿಧಾನ ಪರಿಷತ್ ಕಲಾಪದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆಗಳನ್ನು ಸಹಕಾರ ಇಲಾಖೆಗಳ ಮೂಲಕ ಉಳಿಸಿ, ನಿರ್ಣಯ ಕೈಗೊಳ್ಳುವಂತೆ ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಸೋಮಶೇಖರ್ ಸಹಕಾರ ಇಲಾಖೆಯು ನಷ್ಟದಲ್ಲಿದೆ ಎಂದು ಅಳಲು ತೋಡಿಕೊಂಡರು. ರಾಜ್ಯದ ಶಾಸಕರೇ ಸಾಲದ ಒಂದು ರೂಪಾಯಿಯಷ್ಟು ಹಣವನ್ನು ಪಾವತಿಸಿಲ್ಲ ಎಂದು ವಿಷಾದದ ಧ್ವನಿಯಲ್ಲಿ ಹೇಳಿದರು.
ಬೆಳಗಾವಿ, ಕಾರವಾರ ಡಿಸಿಸಿ ಬ್ಯಾಂಕಲ್ಲಿ ನಮ್ಮ ಶಾಸಕರು ಸಾಲ ಪಡೆದಿದ್ದಾರೆ, ಯಾರೊಬ್ಬರೂ ಮರುಪಾವತಿಸಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೂಡ ಸಾಲ ಕಟ್ಟಿಲ್ಲ ಎಂದು ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದರು.