ಬೆಂಗಳೂರು : ಲಾಬಿ ಮಾಡಿದವರು ಸಚಿವರಾಗುತ್ತಿದ್ದಾರೆ, ಇದರಿಂದಾಗಿ ನನಗೆ ವೈಯಕ್ತಿಕವಾಗಿ ಬೇಸರವಾಗಿದೆ ಎಂದು ಎಂದು ಮಾಜಿ ಸಚಿವ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ಇಂದು ಸಂಜೆ ವಿಸ್ತರಣೆಯಾಗಲಿದ್ದು, ಏಳೆಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವುದು ಬಹುತೇಕ ಖಚಿತವಾಗಿದೆ.
ನೂತನ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವುದಕ್ಕೆ ರೇಣುಕಾಚಾರ್ಯ ಬೇಸರ ವ್ಯಕ್ತಪಡಿಸಿದ್ದಾರೆ. “ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಲಾಬಿ ಮಾಡಿದವರು ಸಚಿವರಾಗುತ್ತಾರೆ. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸ ನನಗೆ ಇಲ್ಲ. ಅದು ನನ್ನ ಅಪರಾಧ. ವೈಯಕ್ತಿಕವಾಗಿ ನನಗೆ ಬೇಸರವಾಗಿದೆ. ಮಂತ್ರಿಗಿರಿ ಕೊಡಿ ಎಂದು ಯಾರಿಗೂ ನಾನು ಅರ್ಜಿ ಹಾಕಲ್ಲ” ಎಂದು ಅವರು ಹೇಳಿದ್ದಾರೆ.
“ಇದು ಬೆಂಗಳೂರು-ಬೆಳಗಾವಿ ಕ್ಯಾಬಿನೆಟ್. ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನನಗೆ ಬೇಸರವಾಗಿದೆ. ನಾವು ಯಾರ ಮುಂದೆ ಅಸಮಾಧಾನ ಹೇಳಿಕೊಳ್ಳಬೇಕು. ಸ್ವಾಭಿಮಾನ ಬಿಟ್ಟು ಬದುಕುವ ವ್ಯಕ್ತಿ ನಾನಲ್ಲ. ಕ್ಷೇತ್ರದ ಜನತೆ ಹೇಳಿದಂತೆ ಕೇಳುವ ವ್ಯಕ್ತಿ ನಾನು” ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.