ವಿಜಯಪುರ: ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಅವರು ಗೃಹಲಕ್ಷ್ಮಿ ಹಣ ಉಳಿಸಿ, ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಮಸ್ತ ಗ್ರಾಮಸ್ಥರಿಗೆ ಹೋಳಿಗೆ ಊಟ ಮಾಡಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿ, ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎನ್ನುವ ವಿಪಕ್ಷದವರಿಗೆ ಸೂಕ್ತ ಉತ್ತರ ನೀಡಿ, ಸ್ವಾವಲಂಬಿ ಕರ್ನಾಟಕ ರೂಪುಗೊಳ್ಳುತ್ತಿದೆ’ ಎಂದರು.
ಫಲಾನುಭವಿ ಮಾಬೂಬಿ ಅಬ್ಬಾಸಲಿ ಮಾತನಾಡಿ, ‘ಹಳಸದ ಅನ್ನವಿಲ್ಲ. ಅದು ಹಳಸುವ ಮುನ್ನ ಊಟ ಮಾಡಬೇಕು. ಬಾಡದ ಹೂವಿಲ್ಲ, ಅದು ಬಾಡುವ ಮುನ್ನ ಮುಡಿಯಬೇಕು. ಕೆಡಲಾರದ ಹಣ್ಣುಗಳಿಲ್ಲ, ಅವು ಕೆಡುವ ಮುನ್ನ ಸೇವಿಸಬೇಕು. ಸಾಯದ ಮನುಷ್ಯನಿಲ್ಲ, ಸಾಯುವ ಮುನ್ನ ಕೀರ್ತಿ ಪಡೆಯಬೇಕು’ ಎಂದರು.