ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಇಂದು ಪ್ರತ್ಯಕ್ಷವಾಗಿದ್ದು, ವಿಧಾನಸಭಾ ಕಲಾಪಕ್ಕೆ ಹಾಜರಾಗಿದ್ದಾರೆ.
ಸದನಕ್ಕೆ ಹಾಜರಾಗುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನಾನು ಎಲ್ಲಿಯೂ ತಲೆಮರೆಸಿಕೊಂಡಿರಲಿಲ್ಲ. ಊರಿಗೆ ಹೋಗಿದ್ದೆ. ಇ.ಡಿ ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ನೀಡಿಲ್ಲ’ ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದದ್ದಲ್ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದರು. ಎರಡು ದಿನಗಳ ಕಾಲ ಶೋಧ, ವಿಚಾರಣೆ ನಡೆಸಲಾಗಿತ್ತು.
ಶುಕ್ರವಾರ ವಿಶೇಷ ತನಿಖಾ ದಳದ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ದದ್ದಲ್, ಶನಿವಾರ ಮನೆಯ ಬಾಗಿಲು ಬಂದ್ ಮಾಡಿ ನಾಪತ್ತೆಯಾಗಿದ್ದರು.