ಬೆಂಗಳೂರು: ಮಳೆ ಹಾನಿ ವೀಕ್ಷಣೆ ಸಂದರ್ಭದಲ್ಲಿ ಸಮಸ್ಯೆ ಹೇಳಿಕೊಂಡ ಸಂತ್ರಸ್ತೆ ಮಹಿಳೆಗೆ ಶಾಸಕ ಅರವಿಂದ ಲಿಂಬಾವಳಿ ಆವಾಜ್ ಹಾಕಿ ದುರ್ವರ್ತನೆ ತೋರಿದ ಘಟನೆ ಮಹದೇವಪುರದಲ್ಲಿ ನಡೆದಿದೆ.
ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಲು ಅರವಿಂದ ಲಿಂಬಾವಳಿ ಬಂದಾಗ ಸ್ಥಳೀಯ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಳ್ಳಲು ಮನವಿ ಪತ್ರದೊಂದಿಗೆ ನಿಂತಿದ್ದರು. ಅರವಿಂದ ಲಿಂಬಾವಳಿ ಬಂದಾಗ ಮಹಿಳೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಂದಾಗುತ್ತಿದ್ದಂತೆ ಗರಂ ಆದ ಲಿಂಬಾವಳಿ, ಏಕಾಏಕಿ ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೈಯಲ್ಲಿದ್ದ ಪತ್ರವನ್ನು ಕಿತ್ತುಕೊಂಡರು.
ಆಗ ಮಹಿಳೆ ಗೌರವ ಕೊಟ್ಟು ಮಾತನಾಡಿ ಎಂದು ಹೇಳಿದಾಗ, ನಿಂಗೆ ಮಾನ ಮರ್ಯಾದೆ ಇದೆಯಾ?, ನಾಚಿಕೆ ಆಗಲ್ವಾ ನಿಂಗೆ? ಎಂದು ಮಹಿಳೆಗೆ ಆವಾಜ್ ಹಾಕಿದರು. ನಂತರ ಮಹಿಳೆಯನ್ನು ಸ್ಟೇಷನ್ ಗೆ ಕರೆದೊಯ್ದು ಕೂರಿಸಿ ಎಂದ ಪೊಲೀಸರಿಗೆ ಸೂಚಿಸಿದರು.
ಇಡೀ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮಹಿಳೆಯೊಂದಿಗೆ ಲಿಂಬಾವಳಿ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಿಂದೆಯೂ ಲಿಂಬಾವಳಿ ಅವರ ಪುತ್ರಿ ಕೂಡ ನಡು ರಸ್ತೆಯಲ್ಲೇ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡಿ ಸುದ್ದಿಯಾಗಿದ್ದರು.
“ಜಗಳ ಗಂಟಿ ತಂದೆ, ಮಗಳು” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಿಡಿಕಾರಿದ್ದಾರೆ.