ದಂತಚೋರ ವೀರಪ್ಪನ್ ಸ್ವಗ್ರಾಮ ಗೋಪಿನಾಥಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5,300 ಮಂದಿ ವಾಸವಿದ್ದು, ಅವರಲ್ಲಿ ಕೇವಲ 11 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ, ಅವರನ್ನು ಮನವೊಲಿಸಿ ಲಸಿಕೆ ನೀಡುವುದು ಆರೋಗ್ಯ ಇಲಾಖೆಗೆ ಬಹುದೊಡ್ಡ ಸವಾಲಾಗಿದೆ. ಶಿವಗಾಮಿ ಪಂಚಾಯಿತಿಯ 10 ಸಿಬ್ಬಂದಿ ಹಾಗೂ ಪಂಚಾಯಿತಿ ಅಧ್ಯಕ್ಷರೂ ಕೂಡ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದು ಅವರಿಗೆ ಅಚ್ಚರಿ ಮೂಡಿಸಿದೆ. ಗೋಪಿನಾಥನ್ ಪಂಚಾಯಿತಿ ವ್ಯಾಪ್ತಿಗೆ ಪುಣಜೂರು, ಕೊಟೆಯೂರು, ಅರ್ತೂರು, ಆಲಂಬಾಡಿ, ಅಪ್ಪುಗಂಪಟ್ಟಿ ಮತು ಮಾರಿಕೋಟಾಯಿ ಗ್ರಾಮಗಳು ಬರುತ್ತವೆ. ಸದ್ಯ ಈ ಭಾಗದಲ್ಲಿ 58 ಸಕ್ರಿಯ ಕೇಸ್ ಗಳಿದ್ದು, ಅದರಲ್ಲಿ ಆರು ಮಂದಿ ಗುಣಮುಖರಾಗಿದ್ದಾರೆ.
ಆದರೆ ಪಕ್ಕದ ಜಾಗೇರಿ ಗ್ರಾಮದ ವ್ಯಕ್ತಿಯೊಬ್ಬ ಲಸಿಕೆ ತೆಗೆದುಕೊಂಡ ನಂತರ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯಿಂದ ಹಳ್ಳಿಗರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತಮಿಳು ಹಾಸ್ಯನಟ ವಿವೇಕ್ ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ಸಾವನ್ನಪ್ಪಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹರಡಿತು. ಈ ಭಾಗದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಸಿನಿಮಾ ಅಭಿಮಾನಿಗಳಾಗಿದ್ದಾರೆ.
ಏಪ್ರಿಲ್ 30 ರಂದು ಗ್ರಾಮಸ್ಥರಿಗೆ ಚುಚ್ಚುಮದ್ದು ನೀಡಲು ಎಂ ಎಂ ಹಿಲ್ಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿಗಳ ತಂಡ ಗ್ರಾಮಕ್ಕೆ ಬಂದಿದ್ದರೂ, ಗ್ರಾಮಸ್ಥರಲ್ಲಿ ಯಾರೊಬ್ಬರೂ ಲಸಿಕೆ ಪಡೆಯಲು ಮುಂದೆ ಬರಲಿಲ್ಲ, ಸುಮಾರು ಹೊತ್ತು ಕಾದ ನಂತರ, ತಂಡ ವಾಪಾಸಾಯಿತು. ಚುಚ್ಚುಮದ್ದು ತೆಗೆದುಕೊಂಡ ನಂತರ ಯಾವುದೇ ಅಪಾಯವಾಗುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಡಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಸದ್ಯ ಪಿಡಿಒ ಕಿರಣ್, ಸ್ಥಳೀಯ ಯುವಕರು, ಅರಣ್ಯ ಸಿಬ್ಬಂದಿ, ವೀಕ್ಷಕರು ಮತ್ತು ಶಿಕ್ಷಕರ ಮನೆಗೆ ತೆರಳಿ ಲಸಿಕೆ ಪಡೆಯುವಂತೆ ಮನವೊಲಿಸುತ್ತಿದ್ದಾರೆ. ಮುಂದಿನ ಸುತ್ತಿನಲ್ಲಿ 18 ರಿಂದ 18 ವರ್ಷದೊಳಗಿನ ಯುವಕರನ್ನು ಒಳಗೊಳ್ಳುವಂತೆ ಅವರು ಶಿಬಿರವನ್ನು ಆಯೋಜಿಸಿರುವುದಾಗಿ ಅವರು ಹೇಳಿದರು.