ಹಾಪುರ್(ಉತ್ತರ ಪ್ರದೇಶ): ಹರ್ಯಾಣದಿಂದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ಆರೋಪಿಯನ್ನು ಅಪರಿಚಿತ ವ್ಯಕ್ತಿಗಳು ಮಂಗಳವಾರ ಹಾಪುರ್ ಜಿಲ್ಲಾ ನ್ಯಾಯಾಲಯದ ಗೇಟ್ ಬಳಿ ಪೊಲೀಸರ ಸಮ್ಮುಖದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಲಖನ್ ಸಿಂಗ್ ಎಂಬಾತನನ್ನು ಹರಿಯಾಣದ ಫರಿದಾಬಾದ್ ನಿಂದ ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿತ್ತು. ಜಿಲ್ಲಾ ನ್ಯಾಯಾಲಯಕ್ಕೆ ಕರೆತರುತ್ತಿದ್ದಂತೇ ದ್ವಾರದಲ್ಲಿ ಅಪರಿಚಿತ ವ್ಯಕ್ತಿಗಳು ಲಖನ್ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದಾರೆ.
ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿವುದಾಗಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪಕ್ ಭೂಕರ್ ಖಚಿತಪಡಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಾಳಿಕೋರರನ್ನು ಹುಡುಕಲು ಪೊಲೀಸ್ ಠಾಣೆಯೊಂದಿಗೆ ಎಸ್ ಒಜಿಯ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.