ಅಜ್ಮೀರ್: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಸರಕು ಸಾಗಣೆ ಕಾರಿಡಾರ್ ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಡುವ ಮೂಲಕ ಸರಕು ರೈಲನ್ನು ಹಳಿ ತಪ್ಪಿಸುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ತಲಾ 70 ಕೆ.ಜಿ ತೂಕದ ಸಿಮೆಂಟ್ ಬ್ಲಾಕ್ ಗಳಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
‘ಭಾನುವಾರ ಕೆಲವು ದುರ್ಷ್ಕಮಿಗಳು ಸರಕು ಸಾಗಣೆ ಕಾರಿಡಾರ್ನ ಹಳಿಗಳ ಮೇಲೆ ಎರಡು ಸಿಮೆಂಟ್ ಬ್ಲಾಕ್ ಗಳನ್ನು ಇಟ್ಟಿದ್ದಾರೆ. ಗೂಡ್ಸ್ ರೈಲು ಅದಕ್ಕೆ ಡಿಕ್ಕಿ ಹೊಡೆದಿದೆ’ ಎಂದು ವಾಯುವ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಪುರದಲ್ಲಿ ಭಾನುವಾರ ಕಾಳಿಂದಿ ಎಕ್ಸ್ ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಯತ್ನವನ್ನು ಕಿಡಿಗೇಡಿಗಳು ನಡೆಸಿದ್ದರು, ಹಳಿ ಮೇಲೆ ಸಿಲಿಂಡರ್, ಪೆಟ್ರೋಲ್ ತುಂಬಿದ ಬಾಟಲಿಗಳು, ಗನ್ ಪೌಡರ್ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಇರಿ ರೈಲು ಸಿಲಿಂಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಫೋಟಗೊಂಡಿತ್ತು, ಆದರೆ ರೈಲಿಗಾಗಲಿ ಅಥವಾ ಪ್ರಯಾಣಿಕರಿಗಾಗಲಿ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಹಳಿಯಲ್ಲಿ ಅಡಚಣೆ ಉಂಟಾದ ಕಾರಣ ತಕ್ಷಣ ರೈಲ್ವೆ ಸಂರಕ್ಷಣಾ ಪಡೆಗೆ ಎಚ್ಚರಿಕೆ ನೀಡಿ ಸಂಪೂರ್ಣ ತಪಾಸಣೆ ನಡೆಸಿದ ನಂತರ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಯಿತು.