ಕೊಚ್ಚಿ: ಮಲಯಾಳಂ ನಟ ಶ್ರೀನಾಥ್ ಭಾಸಿ ಇತ್ತೀಚೆಗೆ ಬಿಡುಗಡೆಯಾದ ‘ಚಟ್ಟಂಬಿ’ ಚಿತ್ರದ ಪ್ರಚಾರದ ವೇಳೆ ಮನರಂಜನಾ ಪೋರ್ಟಲ್ನ ಮಹಿಳಾ ಆಂಕರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಡು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಶ್ರೀನಾಥ್ ಭಾಸಿ ತನ್ನ ಇತ್ತೀಚಿನ ಚಲನಚಿತ್ರದ ಪ್ರಚಾರದ ವೀಡಿಯೊ ಸಂದರ್ಶನದಲ್ಲಿ ತನ್ನ ಮೇಲೆ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಆನ್ಲೈನ್ ಮಾಧ್ಯಮದ ನಿರೂಪಕಿ ಒಬ್ಬರು ಆರೋಪಿಸಿದ್ದರು. ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ಮಹಿಳಾ ಆಂಕರ್ ಕೊಟ್ಟ ದೂರಿನ ಅನ್ವಯ ವಿಚಾರಣೆಗಾಗಿ ಪೊಲೀಸರು ಅವರನ್ನು ಕರೆಸಿದ್ದು, ಬಳಿಕ ಅವರನ್ನು ಬಂಧಿಸಲಾಗಿದೆ.
ಶ್ರೀನಾಥ್ ಭಾಸಿಯವರಿಗೆ ಸೋಮವಾರ ಬೆಳಗ್ಗೆ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತಾದರೂ, ಹೆಚ್ಚಿನ ಸಮಯಾವಕಾಶ ಕೋರಿದ್ದರು. ಮಧ್ಯಾಹ್ನದ ನಂತರ ಅವರು ಗೆಳೆಯರೊಂದಿಗೆ ಠಾಣೆಗೆ ತಲುಪಿದ್ದಾರೆ. ವಿಚಾರಣೆಯ ಬಳಿಕ ಅವರನ್ನು ಬಂಧಿಸಲಾಗಿದ್ದು, ನಟನ ವಿಚಾರಣೆ ಮುಂದುವರೆದಿದೆ. ಪತ್ರಕರ್ತೆಯನ್ನು ಅವಮಾನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ, ಪತ್ರಕರ್ತರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘವು ಭಾಸಿಯನ್ನು ಕರೆದು ವಿಚಾರಿಸುವ ಸಾಧ್ಯತೆಯಿದೆ ಎಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿವೆ.