ಲಖನೌ: ಬೈಕು, ಕಳವು, ಕಾರು ಕಳವು, ಮನೆಗಳಲ್ಲಿ ಕಳವು ಎಂಬುದು ನಮ್ಮ ದೇಶದಲ್ಲಿ ಸಾಮಾನ್ಯ. ಇನ್ನು ವಾಹನಗಳನ್ನು ಕಳವು ಮಾಡಲು ಸಾಧ್ಯವಾಗದಿದ್ದರೆ, ಅವುಗಳ ಬಿಡಿ ಭಾಗಗಳನ್ನು ಹೊತ್ತೊಯ್ಯುತ್ತಾರೆ. ಆದರೆ ಇವೆಲ್ಲವನ್ನೂ ಮೀರಿ ಒಂದು ಹೆಜ್ಜೆ ಮುಂದೆ ಹೋಗಿರುವ ಲಖನೌ ನಗರದ ಕಳ್ಳರ ಗ್ಯಾಂಗ್ ಯುದ್ಧ ವಿಮಾನದ ಟಯರ್’ಗಳನ್ನೇ ಕಳವು ಮಾಡಿ ಪರಾರಿಯಾಗಿದ್ದಾರೆ
ಲಖನೌ’ನಿಂದ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿದ್ದ ಮಿರಾಜ್-2000 ಯುದ್ಧ ವಿಮಾನದ ಟಯರ್’ಗಳು ಕಳುವಾಗಿದ್ದು, ಈ ಕುರಿತು ಉತ್ತರ ಪ್ರದೇಶದ ಆಷಿಯಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಕ್ಷಿ ಕಾ ತಲಾಬ್ ವಾಯುನೆಲೆಯಿಂದ ಜೋಧ್ಪುರ ವಾಯುನೆಲೆಗೆ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ಶಾಹೀನ್ ಪಥ್ ಎಂಬಲ್ಲಿ ಟ್ರಕ್ನಿಂದ ಫೈಟರ್ ಜೆಟ್ ಯುದ್ಧ ವಿಮಾನ ಮಿರಾಜ್-2000 ದ ಹೊಚ್ಚ ಹೊಸ ಟಯರ್’ಗಳನ್ನು ಕಳುವು ಮಾಡಲಾಗಿದೆ. ನವೆಂಬರ್ 27 ರಂದು ಮುಂಜಾನೆ 2 ಗಂಟೆಗೆ ಘಟನೆ ನಡೆದಿರುವುದು, ಇದೀಗ ಬೆಳಕಿಗೆ ಬಂದಿದೆ.
ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಟ್ರಾಫಿಕ್ ಜಾಮ್ನ ಲಾಭ ಪಡೆದು ಮೀರಜ್ ಫೈಟರ್ ಜೆಟ್ನ ಟಯರ್ ಅನ್ನು ಕದ್ದಿದ್ದಾರೆ ಎಂದು ಟ್ರಕ್ ಚಾಲಕ ಹೇಮ್ ಸಿಂಗ್ ರಾವತ್ ಹೇಳಿದ್ದಾರೆ. ಟ್ರಾಫಿಕ್ ಜಾಮ್ನಿಂದಾಗಿ ಸಣ್ಣ ವಾಹನಗಳು ಮುಂದೆ ಸಾಗುತ್ತಿದ್ದರೆ, ದೊಡ್ಡ ವಾಹನಗಳು ಜಾಮ್ನಲ್ಲಿ ಸಿಲುಕಿಕೊಂಡಿದ್ದವು ಎಂದು ಟ್ರಕ್ ಚಾಲಕ ಹೇಳಿದ್ದಾರೆ.
ಕಳ್ಳತನವಾಗಿರುವ ವಿಷಯ ತಿಳಿದ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೆಲ ಸಮಯದ ನಂತರ ಪೊಲೀಸರ ತಂಡವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಫೈಟರ್ ಜೆಟ್ಗಳಲ್ಲಿ ಬಳಸಲಾಗುವ ಹಲವು ಪ್ರಮುಖ ಸಲಕರಣೆಗಳನ್ನೂ ಈ ಟ್ರಕ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇಂಧನ ತುಂಬುವ ವಾಹನ, ಬಾಂಬ್ ಟ್ರಾಲಿ, ಯುನಿವರ್ಸಲ್ ಟ್ರಾಲಿ, ವಿಮಾನದ ಮುಖ್ಯ ಟಯರ್, ನೋಸ್ ಟಯರ್, ಮೆಟ್ಟಿಲು ಹಾಗೂ ಟ್ರಾಲಿಯಂತಹ ಉಪಕರಣಗಳನ್ನು ಸಹ ಸಾಗಿಸಲಾಗುತ್ತಿತ್ತು. ಆದರೆ ಈ ಎಲ್ಲಾ ಸಾಧನಗಳು ಸುರಕ್ಷಿತವಾಗಿವೆ.