ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ: ಕಾಲಾವಕಾಶ ಬೇಕು ಎಂದ ಕೇಂದ್ರ

Prasthutha|

ನವದೆಹಲಿ: ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ತೀರ್ಮಾನ ತೆಗೆದುಕೊಳ್ಳಲು ದೀರ್ಘ ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರಿಂ ಕೋರ್ಟಿಗೆ ಹೇಳಿದೆ. ಚರ್ಚೆ, ರಾಜ್ಯ ಕೇಂದ್ರ ಒಡಂಬಡಿಕೆ ಇತ್ಯಾದಿ ಸಮನ್ವಯ ಸಾಧಿಸಬೇಕಾಗಿದೆ ಎಂದೂ ಕೇಂದ್ರ ಸ್ಪಷ್ಟಪಡಿಸಿದೆ.

- Advertisement -


2017ರಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ ಸಕಲ ಸವಲತ್ತು ಒದಗಿಸಬೇಕು ಎಂದು ವಕೀಲ ಅಶ್ವಿನಿಕುಮಾರ ಉಪಾಧ್ಯಾಯರು ಅವರು ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಮತ್ತೆ ಅವರು 2020ರಲ್ಲಿ ಸಲ್ಲಿಸಿದ್ದ ಅರ್ಜಿ ಈಗ ವಿಚಾರಣೆಗೆ ಬಂದಿದೆ.


ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೋರಿದ ಉಪಾಧ್ಯಾಯರ ಅರ್ಜಿಯನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿಕೊಡಲಾಗಿತ್ತು. ಈ ತೀರ್ಮಾನವನ್ನು ಕೇಂದ್ರ ಸರಕಾರವೇ ಕೈಗೊಳ್ಳಬೇಕು ಎಂದು ಆಯೋಗ ಉತ್ತರಿಸಿತ್ತು.
ಇದರ ನಡುವೆ ಟಿ. ಎಂ. ಎ. ಪೈ ಪ್ರಕರಣದಲ್ಲಿ ಅಲ್ಪಸಂಖ್ಯಾತ ಪಟ್ಟಿ ತೀರ್ಮಾನ ರಾಜ್ಯ ಸರಕಾರ ಮಾಡಬೇಕು ಎಂದು ತೀರ್ಪು ನೀಡಲಾಗಿತ್ತು. ಅದರ ಮೇಲೆ ಕೇಂದ್ರ ಸರಕಾರವು ಸೋಮವಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ದೀರ್ಘ ಕಾಲಾವಕಾಶ ಬೇಕು. ಚರ್ಚೆ, ರಾಜ್ಯ ಕೇಂದ್ರ ಒಡಂಬಡಿಕೆ ಇತ್ಯಾದಿ ಸಮನ್ವಯ ಸಾಧಿಸಬೇಕು ಎಂದೂ ಕೇಂದ್ರ ಹೇಳಿದೆ.
“ಇದು ಹಲವಾರು ಶಾಖೆಗಳ ನಡುವೆ ಒಮ್ಮತದ ಚರ್ಚೆ ತೀರ್ಮಾನ ಆಗಬೇಕಾದ ವಿಚಾರ. ಇವನ್ನೆಲ್ಲ ಕೂಲಂಕಷವಾಗಿ ಕಂಡುಕೊಳ್ಳದೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದು ದೇಶದಲ್ಲಿ ಸರಣಿ ಗೊಂದಲಗಳಿಗೆ ಕಾರಣವಾದೀತು” ಎಂದು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯವು ಹೇಳಿದೆ.
ಉಪಾಧ್ಯಾಯರಿಗೆ ಈ ನಿಟ್ಟಿನಲ್ಲಿ ಉತ್ತರಿಸಿದ ಅಲ್ಪಸಂಖ್ಯಾಕರ ಆಯೋಗವು, ಕೇಂದ್ರ ಮಾತ್ರ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯ ಎಂದು ಹೇಳಿದೆ.
ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯದರ್ಶಿಗಳು ಮೂರು ಪುಟಗಳ ಉತ್ತರ ಬರೆದಿದ್ದು, ಅಲ್ಪಸಂಖ್ಯಾತರೆಂದು ಸ್ಥಾನಮಾನ ನೀಡುವ ಹಕ್ಕು ಕೇಂದ್ರ ಸರಕಾರಕ್ಕೆ ಮಾತ್ರ ಇದೆ. ಹಾಗೆ ಅದು ಗೆಜೆಟ್ ಪ್ರಕಟಣೆ ಮಾಡುವುದಕ್ಕೆ ಮೊದಲು ತುಂಬ ವ್ಯಾಪಕವಾದ ಮಾತುಕತೆಗಳನ್ನು ನಡೆಸಬೇಕಾಗಿರುತ್ತದೆ ಎಂದು ಹೇಳಲಾಗಿದೆ.
“ಇದನ್ನು ಗೌರವಾನ್ವಿತ ಕೋರ್ಟು ಗಮನಕ್ಕೆ ತೆಗೆದುಕೊಂಡು, ಇದರಲ್ಲಿ ಹತ್ತಾರು ಸಾಮಾಜಿಕವಾಗಿ ಗಮನಿಸಬೇಕಾದ ಸಂಗತಿಗಳು ಇವೆ ಮತ್ತು ಸಿಕ್ಕುಗಳು ಬಿಡಿಸಬೇಕಾದುದು ಸಹ ಹತ್ತಾರು ಇರುವುದರಿಂದ ಮುಂದೆ ಬಿಕ್ಕಟ್ಟು ಉಂಟಾಗದಂತೆ ಪರಿಹರಿಸಬೇಕಾದ ಪ್ರಕರಣ ಎಂದು ಗಮನಕ್ಕೆ ತೆಗೆದುಕೊಳ್ಳಬೇಕು” ಎಂದು ಸುಪ್ರೀಂ ಅವಗಾಹನೆಗೆ ತರಲಾಗಿದೆ.
ಮಾರ್ಚ್ 25ರಂದು ತಕ್ಕ ಸಮಯದಲ್ಲಿ ಉತ್ತರಿಸಿಲ್ಲ ಎಂದು ಕೇಂದ್ರಕ್ಕೆ ರೂ. 7,500 ದಂಡ ಹಾಕಿದ ಕೋರ್ಟು, ರಾಜ್ಯದ ನೆಪ ಹೇಳಿದರೆ ಸಾಲದು, ಕೇಂದ್ರವೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಹಕ್ಕು ಹೊಂದಿರುವುದರಿಂದ ಜವಾಬ್ದಾರಿಯಿಂದ ಉತ್ತರಿಸುವಂತೆ ಕೇಳಿತ್ತು. ಆದರೆ 2017ರ ಉಪಾಧ್ಯಾಯರ ಅರ್ಜಿಯನ್ನು ವಜಾ ಮಾಡಿದ ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯು ರಾಷ್ಟ್ರೀಯ ಹಿತಾಸಕ್ತಿಯದಾಗಲಿ, ಹೆಚ್ಚು ಜನರ ಹಿತಾಸಕ್ತಿಯದಾಗಲಿ ಆಗಿಲ್ಲ ಎಂದು ಹೇಳಿತು.
ಇದರ ವಿಚಾರಣೆಯ ವೇಳೆ ಮಾರ್ಚ್ 28ರಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು, ಇದಕ್ಕೆ ಉತ್ತರಿಸಲು ಇನ್ನಷ್ಟು ಸಮಯ ನೀಡಬೇಕು ಎಂದು ಸುಪ್ರೀಂಕೋರ್ಟ್ ಪೀಠವನ್ನು ಕೇಳಿಕೊಂಡಿದ್ದರು. ಆಗ ಕೋರ್ಟು ಅವರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು.
ಅದೇ ವೇಳೆ ಸರ್ವೋಚ್ಚ ನ್ಯಾಯಾಲಯವು ಏನಾದರೂ ಹೊಸದಾಗಿ ಅರ್ಜಿ ಸಲ್ಲಿಸುವುದಿದ್ದರೆ ಅದಕ್ಕೆ ಎರಡು ವಾರಗಳ ಕಾಲಾವಕಾಶ ನೀಡುವುದಾಗಿ ಹೇಳಿತು. ಮೇ 10ಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಆದರೆ ಕೇಂದ್ರ ಸರಕಾರವು ನಾಲ್ಕು ವಾರದೊಳಗೆ ಉತ್ತರ ನೀಡಿಲ್ಲ. ಮೇ 9ರಂದಷ್ಟೆ ಸುಪ್ರೀ ಕೋರ್ಟಿಗೆ ಇದು ವ್ಯಾಪಕವಾಗಿ ಚರ್ಚಿಸಿ ತೆಗೆದುಕೊಳ್ಳಬೇಕಾದ ತೀರ್ಮಾನ ಎಂದು ಉತ್ತರ ಕೊಟ್ಟಿದೆ.
ಉಪಾಧ್ಯಾಯರ ಅರ್ಜಿಯು 2011ರ ಜನಗಣತಿಯನ್ನು ಆಧರಿಸಿದ್ದಾಗಿತ್ತು. ಅದರಂತೆ ಲಕ್ಷದ್ವೀಪ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಮಣಿಪುರ, ಪಂಜಾಬುಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಹಾಗಾದರೆ ಟಿಎಂಎ ಪೈ ಪ್ರಕರಣದಲ್ಲಿನಂತೆ ಆ ರಾಜ್ಯಗಳಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಘೋಷಿಸಿ ಸವಲತ್ತು ಒದಗಿಸಲು ಉಪಾಧ್ಯಾಯರ ಅರ್ಜಿ ಒತ್ತಾಯಿಸಿತ್ತು. 30ನೇ ಆರ್ಟಿಕಲ್ ಪ್ರಕಾರ ಭಾಷಾ ಅಲ್ಪಸಂಖ್ಯಾತರ ಸವಲತ್ತಿನಡಿ ಪೈ ಶಾಲಾ ಕಾಲೇಜುಗಳು ಸವಲತ್ತು ಪಡೆದಿವೆ.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸೆಕ್ಷನ್ 2(ಸಿ) ಪ್ರಕಾರ ಮುಸ್ಲಿಮರು, ಕ್ರಿಶ್ಚಿಯನರು, ಸಿಖ್ ಗಳು, ಬೌದ್ಧರು, ಪಾರಸಿಗಳನ್ನು ಅಲ್ಪಸಂಖ್ಯಾತರೆಂದು ಪಟ್ಟಿ ಮಾಡಿದಂತೆಯೇ ಹಿಂದೂಗಳನ್ನೂ ಪಟ್ಟಿ ಮಾಡಬೇಕು ಎಂಬುದು ಉಪಾಧ್ಯಾಯರ ಮೊದಲ ಅರ್ಜಿಯ ಮುಖ್ಯಾಂಶವಾಗಿತ್ತು. 2014ರಲ್ಲಿ ಜೈನರನ್ನು ಅಲ್ಪಸಂಖ್ಯಾತ ಪಟ್ಟಿಗೆ ಸೇರಿಸಲಾಗಿದೆ. ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಮೈನಾರಿಟಿ ಗುಂಪಿಗೆ ಸೇರಿಸಲು ಏನು ತೊಂದರೆ ಎನ್ನುವುದು ಉಪಾಧ್ಯಾಯರ ತಕರಾರು ಆಗಿತ್ತು.
ಕೋರ್ಟು ಅಲ್ಪಸಂಖ್ಯಾತರ ಆಯೋಗವನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿತ್ತು. ಅದು ನಮ್ಮ ವ್ಯಾಪ್ತಿಗೆ ಬಾರದು; ಕೇಂದ್ರವೇ ಮಾಡಬೇಕು ಎಂದು ಆಯೋಗ ಹೇಳಿತು. 2020ರ ಆಗಸ್ಟ್ ನಲ್ಲಿ ಉಪಾಧ್ಯಾಯರು ಹೊಸದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.



Join Whatsapp