ಬೆಂಗಳೂರು: ಮೊದಲು ಅಲ್ಪಸಂಖ್ಯಾತರ ವಿರುದ್ಧ ನಂತರ ಎಲ್ಲ ವರ್ಗಗಳ ವಿರುದ್ಧ ದಾಳಿ ಮಾಡುವುದೇ ಬಿಜೆಪಿ ಮತ್ತು ಸಂಘಪರಿವಾರದ ಗುರಿಯಾಗಿದೆ. ಈಗ ಸಾರ್ವಕರ್ ಅವರ ವಿಚಾರದಲ್ಲೂ ಅದೇ ಆಗುತ್ತಿದೆ. ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟವರನ್ನು ದೇಶಭಕ್ತ ಎಂದು ಬಿಂಬಿಸಿ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ನೆಹರೂ, ದೇಶಕ್ಕಾಗಿ ತ್ಯಾಗ ಮಾಡಿರುವ ಅವರ ಕುಟುಂಬವನ್ನು ಟೀಕಿಸುತ್ತಿದೆ. ನೆಹರೂ ಅವರು ಸಮೃದ್ಧ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರ ಭಾವಚಿತ್ರ ಹಾಕದೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಎಲ್ಲ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಂದು ಪ್ರಚಾರ ಸಮಿತಿಯ ಕಾರ್ಯಾಲಯವನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಿದ್ದೇವೆ. ನಮ್ಮ ಪದಾಧಿಕಾರಿಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ. ಕ್ರಿಯಾಶೀಲರಾಗಿರುವ ಅನೇಕರಿಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಆ.19ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದೇನೆ. 19ರಂದು ಕಲಬುರ್ಗಿಯಿಂದ ಆರಂಭವಾಗಿ, 20ರಂದು ಹುಬ್ಬಳ್ಳಿ, ಅಂದು ಸಂಜೆ ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರ, ಸೆ.1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6 ಬಳ್ಳಾರಿ, ವಿಜಯನಗರ, 7ರಂದು ರಾಯಚೂರು, 8ರಂದು ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ. ಸೆ.27ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಕಾರ್ಯಕ್ರಮ ತಯಾರಿ ಗಮನದಲ್ಲಿಟ್ಟುಕೊಂಡು ಉಳಿದ ಪ್ರವಾಸ ಹಮ್ಮಿಕೊಳ್ಳುತ್ತೇನೆ. ಈ ಪ್ರವಾಸದಲ್ಲಿ ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಇಂದು ಪಕ್ಷದ ನಾಯಕರೆಲ್ಲರೂ ಚರ್ಚೆ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳು, ಪ್ರಥಮ ಪ್ರಧಾನಿ ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ರಾಜ್ಯದ ಜನರಿಗೆ ತಿಳಿಸಲು ಕಾರ್ಯಕ್ರಮ ರೂಪಿಸುತ್ತೇವೆ. ಇನ್ನು ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಅವರ ಸರ್ಕಾರದಿಂದ ಸಿದ್ದರಾಮಯ್ಯ ಅವರ ಸರ್ಕಾರದ ವರೆಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಚಾರ ಮಾಡುತ್ತೇವೆ. ಬಿಜೆಪಿ ಸರ್ಕಾರದ ವೈಫಲ್ಯಗಳು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಕೊಟ್ಟಿದ್ದ ಮಾತು, ಅದರ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲ, ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವಲ್ಲಿ ವಿಫಲ, ರೈತರ ಆದಾಯ ಡಬಲ್ ಆಗಿಲ್ಲ. ಅವರು ಕೊಟ್ಟ ಮಾತು ನಡೆದಿಲ್ಲ. ಬೆಲೆಏರಿಕೆ, ನಿರುದ್ಯೋಗ ಹೆಚ್ಚಾಗಿದೆ.
ನೋಟುಅಮಾನ್ಯ, ಅವೈಜ್ಞಾನಿಕ ಜಿಎಸ್ ಟಿಯಿಂದ ಜನರಿಗೆ ಆಗುತ್ತಿರುವ ತೊಂದರೆ ಎಲ್ಲ ವಿಚಾರದಲ್ಲೂ ಜನಿರೆಗೆ ಜಾಗೃತಿ ಮೂಡಿಸುತ್ತೇವೆ. ಹಾಲು ಮೊಸರಿನ ಮೇಲೆ ಜಿಎಸ್ ಟಿ ಜತೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೂ ಜಿಎಸ್ ಟಿ ಹಾಕಿದ್ದಾರೆ. ಆ ಮೂಲಕ ಈ ಸರ್ಕಾರ ಬದುಕಲು ಬಿಡುವುದಿಲ್ಲ, ಸತ್ತ ಮೇಲೂ ಬಿಡುವುದಿಲ್ಲ ಎಂಬಂತೆ ಸುಲಿಗೆ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದರು. ಅವರು ಕೊಟ್ಟ ಯಾವುದೇ ಭರವಸೆ ನೀಡಿಲ್ಲ. ಇನ್ನು ಈ ಸರ್ಕಾರದಲ್ಲಿ 40% ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನಿಗಳಿಗೆ ಗುತ್ತಿಗೆದಾರರ ಸಂಘ ಅಧ್ಯಕ್ಷರು ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟರ ವಿರುದ್ಧ ಆದಾಯ ತೆರಿಗೆ, ಇಡಿ, ಸಿಬಿಐ ದಾಳಿ ಆಗಿಲ್ಲ? ಪ್ರಧಾನಿಗಳು ಮೌನವಾಗಿರುವುದೇಕೆ? ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದೆ. ಸರ್ಕಾರದ ಮಂತ್ರಿಗಳು ಯಾವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಇದು ದಿಕ್ಕು ದೆಸೆ ಇಲ್ಲದ ಸರ್ಕಾರವಾಗಿದೆ. ಇದರ ಜತೆಗೆ ಸಚಿವ ಮಾಧುಸ್ವಾಮಿ ಅವರು ಈ ಸರ್ಕಾರ ಕಾಲವನ್ನು ತಳ್ಳಿಕೊಂಡು ಹೋಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಇದನ್ನು ಕಾನೂನು ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಪಾಟೀಲ್ ತಿಳಿಸಿದರು.
ಕರ್ನಾಟಕ ಎಲ್ಲ ವರ್ಗದ ಜನರ ನೆಚ್ಚಿನ ತಾಣವಾಗಿತ್ತು. ಎಲ್ಲರನ್ನು ಆಕರ್ಷಿಸುತ್ತಿತ್ತು. ಇದು ಕರ್ನಾಟಕ ಸಮೃದ್ಧಿ ರಾಜ್ಯವಾಗಿತ್ತು. ಇದಕ್ಕೆ ಕುವೆಂಪು ಅವರು ನಮ್ಮ ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದರು. ಆದರೆ ಈಗ ಇದನ್ನು ನಾಶ ಮಾಡಲಾಗುತ್ತಿದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ, ಮತ ವಿಭಜನೆಗಾಗಿ ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿಚಾರಗಳಲ್ಲಿ ಗೊಂದಲ ಸೃಷ್ಟಿಸಿದರು. ನಂತರ ಚಕ್ರತೀರ್ತ ಅವರ ಪಠ್ಯ ಪರಿಷ್ಕರಣ ಸಮಿತಿ ಮೂಲಕ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿದರು. ಈ ಸಮಿತಿ ಬಸವಣ್ಣ, ಮಹಾತ್ಮ ಗಾಂಧಿ, ನಾರಾಯಣ ಗುರು, ಸುರಪುರ ನಾಯಕರು, ಶಂಕರಾಚಾರ್ಯರು, ಆದಿ ಚುಂಚನಗಿರಿ ಸ್ವಾಮಿ, ಕುವೆಂಪು, ಸಿದ್ದಗಂಗಾ ಸ್ವಾಮಿ ಸೇರಿದಂತೆ ಎಲ್ಲರ ಇತಿಹಾಸ ತಿರುಚಿ ಅಪಮಾನ ಮಾಡಿದರು. ಇದು ಅವರ ನಿಜವಾದ ಅಜೆಂಡಾವನ್ನು ಪ್ರದರ್ಶಿಸುತ್ತದೆ ಎಂದು ಆರೋಪಿಸಿದರು.
ಈ ಎಲ್ಲ ವಿಚಾರ ಚರ್ಚೆ ಮಾಡಿದ್ದು, ಜಿಲ್ಲಾ ಮಟ್ಟದಲ್ಲಿ ನಾಯಕರು, ಮುಖಂಡರಿಗೆ ತಿಳಿಸಬೇಕಾಗುತ್ತದೆ. ಇನ್ನು ಸ್ಥಳೀಯ ಸಮಸ್ಯೆಗಳ ವಿಚಾರವಾಗಿ ಚರ್ಚೆ ಮಾಡಬೇಕಾಗುತ್ತದೆ. ಉದಾಹರಣೆಗೆ ಕಲ್ಯಾಣ ಕರ್ನಾಟಕದಲ್ಲಿ ಆರ್ಟಿಕಲ್ 371 ಮೂಲಕ ವಿಶೇಷ ಸ್ಥಾನಮಾನ ವಿಚಾರ. ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಲಾಲ ಕೃಷ್ಣ ಆಡ್ವಾಣಿ ಅವರು ಸಂಸತ್ತಿನಲ್ಲಿ ಸಾಧ್ಯವಿಲ್ಲ ಎಂದಿದ್ದನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಮಾಡಿ ತೋರಿಸಿದರು. ಇದರಿಂದ ಆ ಭಾಗದ 8-10 ಜಿಲ್ಲೆಗಳ ಯುವಕರಿಗೆ ಕೆಲಸ ಸಿಗುತ್ತಿದೆ, ಆ ಭಾಗ ಅಭಿವೃದ್ಧಿ ಕಾಣುತ್ತಿದೆ. ಇಂತಹ ಸ್ಥಳೀಯ ವಿಚಾರಗಳ ಚರ್ಚೆಗಳು ಆಗಬೇಕಿದೆ. ಅವುಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ನಮ್ಮ ಪ್ರಚಾರ ಸಮಿತಿ ಅಧ್ಯಕ್ಷರು ಮೊದಲ ಹಂತದ ಪ್ರವಾಸ ಮಾಡಿ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ನೇಮಿಸಿ, ನಂತರ ಜಿಲ್ಲಾ ಮಟ್ಟದ ಪದಾಧಿಕಾರಿ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಲು ಈ ಪ್ರವಾಸ ಮಾಡುತ್ತಿದ್ದಾರೆ. ಮುಂದೆ ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಇನ್ನು ಕನ್ಯಾಕುಮಾರಿಯಿಂದ ಸೆ.7ರಂದು ಭಾರತ್ ಜೋಡೋ ಕಾರ್ಯಕ್ರಮ ಆರಂಭವಾಗಲಿದ್ದು, ಕಾಶ್ಮೀರದವರೆಗೆ ನಮ್ಮ ನಾಯಕ ರಾಹುಲ್ ಗಾಂಧಿ ಅವರು 3500 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಸೆ.27ರ ನಂತರ ರಾಜ್ಯದಲ್ಲಿ 21ದಿನಗಳ ಕಾಲ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ. ಗುಂಡ್ಲುಪೇಟೆಯಿಂದ ರಾಯಚೂರಿನವರೆಗೂ ಎಲ್ಲೆಡೆ ಪ್ರಚಾರ ಮಾಡಲಾಗುವುದು. ಭಾರತ್ ಜೋಡೋ ಕಾರ್ಯಕ್ರಮದಲ್ಲಿ ಸಮಾವೇಶ ಮಾಡುವ ಬಗ್ಗೆ ಇನ್ನು ಚರ್ಚೆ ಆಗಿಲ್ಲ. ಬಳ್ಳಾರಿಯಲ್ಲಿ ಒಂದು ಸಾರ್ವಜನಿಕ ಸಭೆ ಮಾಡುವ ಆಲೋಚನೆ ಇದೆ.
ಪಕ್ಷದ ಆಂತರಿಕ ಸಮೀಕ್ಷೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ನಮಗೆ ಈಗಾಗಲೇ 136 ಸ್ಥಾನಗಳು ಸಿಗಲಿವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು 150 ಸ್ಥಾನಗಳ ಗುರಿ ನೀಡಿದ್ದು, ಮೊದಲ ಹಂತದ ಸಮೀಕ್ಷೆಯಲ್ಲಿ ನಾವು 136ರಷ್ಟು ತಲುಪಿದ್ದೇವೆ’ ಎಂದು ಉತ್ತರಿಸಿದರು.