ಮೈಸೂರು: ಪತ್ನಿಯ ಅಕ್ಕನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ವೆಸಗಿ ಗರ್ಭಿಣಿಯಾಗಿಸಿ ಪೊಲೀಸರಿಗೆ ಹೆದರಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾರೋಪುರದಲ್ಲಿ ನಡೆದಿದೆ.
ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರದೀಪ್ (26) ಅಸ್ವಸ್ಥನಾಗಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ. ಪತ್ನಿಯನ್ನು ಹೆರಿಗೆಗೆ ಕಳುಹಿಸಿದ ಆರೋಪಿ ಪತಿ, ಅತ್ತಿಗೆಯ (ಪತ್ನಿಯ ಅಕ್ಕ) ಮಗಳ (14) ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಪೊಲೀಸರಿಗೆ ಹೆದರಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹಾರೋಪುರದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಪ್ರದೀಪ್ ತನ್ನ ಪತ್ನಿಯನ್ನು ತವರು ಮನೆಗೆ ಹೆರಿಗೆಗಾಗಿ ಕಳುಹಿಸಿದ್ದ. ಮನೆ ಕೆಲಸ ಮಾಡಲು ಬಂದಿದ್ದ ಪತ್ನಿಯ ಅಕ್ಕನ ಮಗಳನ್ನು ತಬ್ಬಿಕೊಂಡು ಫೋಟೋ ತೆಗೆದುಕೊಂಡಿದ್ದು ಬೇರೆಯವರಿಗೆ ಆ ಫೋಟೋ ತೋರಿಸುವುದಾಗಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಹಲವು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಪ್ರದೀಪ್ ತಾನು ನಡೆಸಿದ ಕೃತ್ಯ ಮುಚ್ಚಿಹಾಕಲು ಖಾಸಗಿ ಲ್ಯಾಬ್ ನಲ್ಲಿ ಬಾಲಕಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ಲ್ಯಾಬ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಅಪ್ರಾಪ್ತೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.