ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಯತ್ನಿಸಿದ್ದು, ವಿಪಕ್ಷ ಮುಖಂಡ ಸುವೆಂದು ಅಧಿಕಾರಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಬಿಜೆಪಿ ಕಾರ್ಯಕರ್ತರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿದ್ದು, ಆಕ್ರೋಶಿತರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಸಂಸದ ಲಾಕೆತ್ ಚಟರ್ಜಿ ಮತ್ತು ಪಕ್ಷದ ಮುಖಂಡ ರಾಹುಲ್ ಸಿನ್ಹಾ ಅವರನ್ನು ಬಂಧಿಸಿ ಪೊಲೀಸ್ ವ್ಯಾನ್’ನಲ್ಲಿ ಜೈಲಿಗೆ ಕೊಂಡೊಯ್ಯಲಾಯಿತು. ಅವರನ್ನು ಸಚಿವಾಲಯ ಬಳಿಯ ಎರಡನೇ ಹೂಗ್ಲಿ ಸೇತುವೆಯ ಸಮೀಪದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಎದುರು ತಡೆದು ನಿಲ್ಲಿಸಲಾಗಿತ್ತು.
ಟಿಎಂಸಿ ಸರ್ಕಾರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ ಬಿಜೆಪಿ ಪಕ್ಷ, ನಬನ್ನಾ ಅಭಿಜನ್ ಎಂಬ ಹೆಸರಿನಲ್ಲಿ ಸಚಿವಾಲಯಕ್ಕೆ ಮುತ್ತಿಗೆ ಹಾಕುವ ಯೋಜನೆಯನ್ನು ರೂಪಿಸಿದ್ದು, ರಾಜ್ಯದೆಲ್ಲೆಡೆಯಿಂದ ಬಿಜೆಪಿ ಬೆಂಬಲಿಗರು ಕೋಲ್ಕತ್ತಾ ಮತ್ತು ನೆರೆಯ ಹೌರಾಕ್ಕೆ ಬಂದಿದ್ದರು.
ಬಿಜೆಪಿಯ ನಬನ್ನಾ ಅಭಿಜನ್ ಜಾಥಾದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಗಳನ್ನು ಹೇರಲಾಗಿತ್ತು. ನಗರವನ್ನು ನಬನ್ನಾದೊಂದಿಗೆ ಜೋಡಿಸುವ ಎರಡನೇ ಹೂಗ್ಲಿ ಸೇತುವೆಯ ಮೇಲೆ ಬ್ಯಾರಿಕೇಡ್’ಗಳನ್ನು ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.