ಬೆಂಗಳೂರು: ಯಶವಂತಪುರದಲ್ಲಿ ಮೂರು ಎಕರೆ ಪ್ರದೇಶದಲ್ಲಿ ನೂತನ ವಕ್ಫ್ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಕ್ಫ್ ಮಂಡಳಿಯ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಆದಷ್ಟು ಬೇಗ ಸರ್ಕಾರದ ನೆರವು ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ವಕ್ಫ್ ಮಂಡಳಿಯ ಮೂರು ಎಕರೆ ಜಾಗ ಯಶವಂತಪುರದಲ್ಲಿದೆ. ಈ ಜಾಗದಲ್ಲಿ ಒಂದು ಎಕರೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಸಮುದಾಯದಲ್ಲಿ ವಕ್ಫ್ ಭವನ ನಿರ್ಮಾಣದ ಕನಸು ಬಹಳ ಹಿಂದಿನಿಂದಲೂ ಇದೆ. ಅದನ್ನು ಸಾಕಾರ ಮಾಡಲು ನಾವು ತಯಾರಿದ್ದೇವೆ. ನಮ್ಮ ಸರ್ಕಾರ ನೆರವು ನೀಡುವ ವಿಶ್ವಾಸ ಇದೆ. ದೇಶದಲ್ಲೇ ಮಾದರಿ ವಕ್ಫ್ ಭವನ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ಪ್ರಸ್ತುತ ನವೀಕೃತ ಕಟ್ಟಡಕ್ಕೆ 2 ಕೋಟಿ ರೂ. ವೆಚ್ಚ ಮಾಡಿದ್ದು, ಇದರ ಅಗತ್ಯತೆ ಹೆಚ್ಚಾಗಿತ್ತು. ಈ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಬೇಕಾಗಿದ್ದು 19 ಲಕ್ಷ ರೂ. ಹೆಚ್ಚುವರಿಯಾಗಿ ಒದಗಿಸುವ ಭರವಸೆ ನೀಡಿದ್ದಾರೆ.
ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಪಿ ಸಅದಿ ಮಾತನಾಡಿ, ಇದೊಂದು ಉತ್ತಮ ಕೆಲಸವಾಗಿದೆ. ಈ ಕೆಲಸ ನಮ್ಮ ಕಾಲದಲ್ಲಿ ಆಗಿದೆ ಎಂಬ ಸಂತೋಷ ಇದೆ. ಸಚಿವ ಜಮೀರ್ ಅಹಮದ್ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ವಕ್ಫ್ ಮಂಡಳಿ ಸದಸ್ಯರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಖಾನ್ ಫರ್ವೇಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು