ಮನವಿ ಹೊತ್ತು ಬಂದ ಮಹಿಳೆಯ ಕೆನ್ನೆಗೆ ಬಾರಿಸುವಷ್ಟು ಸೊಕ್ಕಿರುವ ಸಚಿವ ಸೋಮಣ್ಣ ಸಾರ್ವಜನಿಕ ಜೀವನದಲ್ಲಿರಲು ಅನರ್ಹ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಮನೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ತನಗೆ ಮನೆ ಮಂಜೂರಾಗಿಲ್ಲ ಎಂದು ನೋವು ತೋಡಿಕೊಳ್ಳಲು ಬಂದ ಮಹಿಳೆಯ ಕಪಾಳಕ್ಕೆ ಬಾರಿಸುವ ಮೂಲಕ ಹೆಣ್ಣನ್ನು ತುಚ್ಚವಾಗಿ ಕಾಣುವುದು ಮನುವಾದಿ ಬಿಜೆಪಿಯ ಸಂಸ್ಕೃತಿ ಎಂದು ವಸತಿ ಸಚಿವ ಸೋಮಣ್ಣ ತೋರಿಸಿಕೊಟ್ಟಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀರ್ ಮೈಸೂರು ಹೇಳಿದ್ದಾರೆ.

- Advertisement -


ಮನವಿ ಹೊತ್ತು ಬರುವವರನ್ನು ಮಹಿಳೆ ಎಂದು ಕೂಡ ನೋಡದೆ ಹಲ್ಲೆ ಮಾಡುವಷ್ಟು ಸೊಕ್ಕಿರುವ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮರ್ಯಾದೆ ಇದ್ದರೆ ಸೋಮಣ್ಣ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಮಜೀದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಇಂತಹ ವರ್ತನೆ ಬಿಜೆಪಿಯ ಸಂಸ್ಕೃತಿಯಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಳೆಯಿಂದ ತಮ್ಮ ಮನೆ ಮುಳುಗಡೆಯಾಗಿದೆ ಎಂದು ಅರವಿಂದ ಲಿಂಬಾವಳಿ ಅವರ ಬಳಿ ತೆರಳಿದ್ದ ಮಹಿಳೆಯೊಂದಿಗೆ ಅವರು ಅಸಭ್ಯವಾಗಿ ವರ್ತಿಸಿದ್ದರು. ಮನವಿ ಹೊತ್ತ ಮಹಿಳೆಯರೊಂದಿಗೆ ಹೀಗೆ ನಡೆದುಕೊಳ್ಳಬೇಕು ಎನ್ನುವುದು ಬಿಜೆಪಿ ಪಕ್ಷದ ನಿಲುವೆ? ಎಂದು ಅವರು ಪ್ರಶ್ನಿಸಿದ್ದಾರೆ.


ಎಲ್ಲ ರಂಗಗಳಲ್ಲೂ ಸೋತು ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಬಿಜೆಪಿ ತನ್ನ ಹತಾಶೆಯನ್ನು ಜನರ ಮೇಲೆ, ಅದರಲ್ಲೂ ಮಹಿಳೆಯರ ಮೇಲೆ ತೋರಿಸುವುದನ್ನು ಬಿಟ್ಟು ಉಳಿದಿರುವ ಆರೆಂಟು ತಿಂಗಳಾದರೂ ಜನರ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುವ ಪ್ರಯತ್ನ ಮಾಡಲಿ ಎಂದು ಮಜೀದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp