ನಮ್ಮವರೇ ವಕ್ಫ್ ಬೋರ್ಡ್ ಅಧ್ಯಕ್ಷರಾಗಿರುವುದರಿಂದ ಸಂಪೂರ್ಣ ಸಹಕಾರ: ಸಚಿವರಾದ ಶಶಿಕಲಾ ಜೊಲ್ಲೆ, ಮಾಧುಸ್ವಾಮಿ ಭರವಸೆ

Prasthutha|

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರೊಬ್ಬರು ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದು, ನಮ್ಮ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ಎಂಬ ಸಂದೇಶವನ್ನು ಈ ಮೂಲಕ ನೀಡಿದ್ದೇವೆ ಎಂದು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

- Advertisement -


ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಶಾಫಿ ಸಅದಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯ ಕಚೇರಿಗೆ ಆಗಮಿಸಿದ ಸಚಿವೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದವರು ಇದುವರೆಗೆ ವಕ್ಫ್ ಮಂಡಳಿ ಅಧ್ಯಕ್ಷರಾಗಿರಲಿಲ್ಲ. ಇದೀಗ ನಮ್ಮ ಪಕ್ಷದ ಸರ್ಕಾರದಿಂದ ನಾಮನಿರ್ದೇಶನಗೊಂಡವರು ಆಯ್ಕೆಯಾಗಿರುವುದು ಹೊಸ ಹೆಜ್ಜೆ. ಈ ಮೂಲಕ ರಾಜ್ಯಕ್ಕೆ ಒಳ್ಳೆಯ ಸಂದೇಶ ಹೋಗಿದೆ. ನಮ್ಮ ಪಕ್ಷದ ವತಿಯಿಂದ ಯಾವ ಭೇದಭಾವ ಇಲ್ಲ ಎಂಬ ಸಂದೇಶ ನೀಡಿದ್ದೇವೆ. ಇಲಾಖೆಯಲ್ಲಿ 32,000 ವಕ್ಫ್ ಸಂಸ್ಥೆಗಳು, 40,000ಕ್ಕೂ ಅಧಿಕ ಆಸ್ತಿಗಳಿವೆ. ಅವುಗಳನ್ನು ರಕ್ಷಿಸುವುದು, ಆದಾಯ ಹೆಚ್ಚಿಸುವುದು, ಶೈಕ್ಷಣಿಕ ನೆರವು ನೀಡುವುದು, ಸಮಾಜದ ಹೆಣ್ಣು ಮಕ್ಕಳ ಆರ್ಥಿಕ ಸುಧಾರಣೆಯ ಬಗ್ಗೆ ಚರ್ಚೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದರು.


ಕಳೆದೆರಡು ತಿಂಗಳುಗಳಿಂದ ಚುನಾವಣೆಗೆ ಅಡೆತಡೆಗಳು ಬಂದಿದ್ದವು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನಿರಂತರ ಸಲಹೆ ಸೂಚನೆ, ಮಾರ್ಗದರ್ಶನದ ಬಳಿಕ ಇದೀಗ ನಮ್ಮ ಪಕ್ಷಕ್ಕೆ ಸಂಬಂಧಪಟ್ಟವರು ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ನೂತನ ಅಧ್ಯಕ್ಷರಿಗೆ ಸಮಾಜದ ಬಗ್ಗೆ ಕಳಕಳಿಯಿದೆ. ಶಿಕ್ಷಣದ ಸುಧಾರಣೆ, ವಕ್ಫ್ ಆಸ್ತಿಯ ರಕ್ಷಣೆಯಾಗಬೇಕು ಎಂಬುದು ಅವರ ಅಭಿಲಾಷೆ. ನಮ್ಮವರೇ ಬೋರ್ಡ್ ನ ಅಧ್ಯಕ್ಷರಾಗಿರುವುದರಿಂದ ಇದು ಸಾಧ್ಯವಾಗಲಿದೆ ಎಂದು ಜೊಲ್ಲೆ ಹೇಳಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಯ ಬಗ್ಗೆ ಹೈಕೋರ್ಟ್ ಮಾಡಿರುವ ಕಮೆಂಟ್ಸ್ ಬಗ್ಗೆ ಕಾನೂನು ಇಲಾಖೆಯಲ್ಲಿ ಚರ್ಚಿಸಿ ಅದಕ್ಕೆ ಪೂರಕವಾದ ಕಾನೂನು ಜಾರಿಗೆ ತರಲಾಗುವುದು ಎಂದರು.

- Advertisement -


ವಕ್ಫ್ ಮಂಡಳಿಗೆ ಚುನಾವಣೆ ನಡೆದಿದ್ದು, ಎಲ್ಲರ ವಿಶ್ವಾಸ ಪಡೆದು ಶಾಫಿ ಸಅದಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪಕ್ಷವನ್ನು ಬೇರೆ ರೀತಿಯಲ್ಲಿ ಬಿಂಬಿಸುತ್ತಿರುವವರಿಗೆ ಸಂದೇಶ ರವಾನೆಯಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳಿಕೆ ನೀಡಿದ್ದು, ಅವರಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ವಕ್ಫ್ ಆಸ್ತಿಗಳು ಯಥೇಚ್ಛವಾಗಿದ್ದು, ಅದರಿಂದ ಬರುವ ಆದಾಯ ಮಾತ್ರ ಕಡಿಮೆಯಿದೆ. ವಕ್ಫ್ ಆಸ್ತಿಯ ವಿವಾದಗಳನ್ನು ತಕ್ಷಣ ಮುಗಿಸಿ, ಆದಾಯ ಹೆಚ್ಚಿಸಲು ಶ್ರಮಿಸಲಾಗುವುದು ಎಂದರು.
ವಕ್ಫ್ ಆಸ್ತಿ ಒತ್ತುವರಿ ಬಗ್ಗೆ ಅನ್ವರ್ ಮಾಣಿಪ್ಪಾಣಿ ನೀಡಿರುವ ವರದಿಯನ್ನು ಮುಂದಿನ ಶಾಸನ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ವಕ್ಫ್ ಆಸ್ತಿಗಳನ್ನು ವಕ್ಫ್ ಬೋರ್ಡ್ ನಲ್ಲೇ ಉಳಿಸುವುದು, ಅದರಿಂದ ಬರುವ ವರಮಾನದಲ್ಲಿ ಬಡವರ ಸೇವೆಗೆ ಬಳಸುವುದು ನಮ್ಮ ಗುರಿಯಾಗಿದೆ ಎಂದರು.


ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೌಲಾನಾ ಶಾಫಿ ಸಅದಿ ಮಾತನಾಡಿ, ಮಂಡಳಿಯ ಸದಸ್ಯರು ಮತ್ತು ಸರ್ಕಾರದ ಸಂಪೂರ್ಣವಾದ ಬೆಂಬಲದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಸ್ಲಿಮ್ ಸಮುದಾಯ ಸಂತ್ರಸ್ತವಾಗಿದ್ದು, ಈ ಸಮುದಾಯದ ಅಭಿವೃದ್ಧಿಗೆ ವಕ್ಫ್ ಬೋರ್ಡ್ ಮೂಲಕ ಶ್ರಮಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.


20 ವರ್ಷಗಳಿಂದ ಕರ್ನಾಟಕದ ಮುಸ್ಲಿಮರು ತುಂಬಾ ಪಾತಾಳಕ್ಕಿಳಿದಿದ್ದಾರೆ. ಮುಸ್ಲಿಮರ ಶೇಕಡಾ 50ರಷ್ಟು ಸಬಲೀಕರಣವನ್ನು ವಕ್ಫ್ ಬೋರ್ಡ್ ನಿಂದ ಮಾಡಲು ಸಾಧ್ಯವಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ವಕ್ಫ್ ಆಸ್ತಿಗಳಿದ್ದರೂ ಸಮುದಾಯಕ್ಕೆ ಅದನ್ನು ಅನುಭವಿಸಲು ಸಾಧ್ಯವಾಗಿಲ್ಲ. ಮುಸ್ಲಿಮ್ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತಲು ವಕ್ಫ್ ಅನುದಾನದಿಂದ ಸಾಧ್ಯವಿದೆ. ವಕ್ಫ್ ಆಸ್ತಿ ವಿವಾದಗಳಿಂದಾಗಿ ಸರಿಯಾಗಿ ಆದಾಯ ಬರುತ್ತಿಲ್ಲ. ವಿನ್ಸನ್ ಮ್ಯಾನರ್, ಬಡೇ ಮಕಾನ್, ಕುಡುಚಿ, ಶ್ರೀರಂಗಪಟ್ಟಣ ಮುಂತಾದ ಕಡೆ ಬೆಲೆಬಾಳುವ ಆಸ್ತಿಗಳಿದ್ದರೂ ಅವುಗಳ ವ್ಯಾಜ್ಯ ನ್ಯಾಯಾಲಯಗಳಲ್ಲಿವೆ. ಆದ್ದರಿಂದ ಕಾನೂನು ಸಚಿವರು ತ್ವರಿತ ಗತಿಯಲ್ಲಿ ಈ ಎಲ್ಲಾ ವ್ಯಾಜ್ಯಗಳನ್ನು ಮುಗಿಸಿದರೆ ಬಡಪಾಯಿ ಮುಸ್ಲಿಮ್ ಸಮಾಜವನ್ನು ಮೇಲೆತ್ತಲು ಸಾಧ್ಯವಾಗಲಿದೆ ಎಂದರು.
ವಕ್ಫ್ ಮಂಡಳಿಯ ನವೀಕರಣಕ್ಕೆ ತಕ್ಷಣ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಇದೇ ವೇಳೆ ಶಾಫಿ ಸಅದಿ ಮನವಿ ಮಾಡಿದರು.

Join Whatsapp