ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ: ಪ್ರತಿಭಟನೆ ರದ್ದು

Prasthutha|

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು, ಕಾನೂನು ಚೌಕಟ್ಟು ಮೀರದಂತೆ ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಿ ಶೀಘ್ರವಾಗಿ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದರು.

- Advertisement -

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ತಿಂಗಳ 14ರಿಂದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಸಚಿವರು ಇಂದು ಕರ್ನಾಟಕ ರಾಜ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿ ಗೋಜಲಾಗಿದ್ದು, ಹಲವಾರು ಜಿಲ್ಲೆಗಳ ಅಧಿಕಾರಿಗಳು ನ್ಯಾಯಾಲಯಗಳ ಮೊರೆ ಹೊಕ್ಕಿರುವುದರಿಂದ ಕಗ್ಗಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಮುಂದಿನ ಸಾಮಾನ್ಯ ವರ್ಗಾವಣೆ ಸಮಯಕ್ಕೆ ಕೌನ್ಸಲಿಂಗ್‌ ನೀತಿಯನ್ನು ಜಾರಿಗೆ ತಂದು ವರ್ಗಾವಣೆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.

- Advertisement -

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪರಿಶೀಲನೆ ನಡೆಸಿ ಎಲ್ಲ ಅಧಿಕಾರಿಗಳಿಗೂ ಈ ಸೌಲಭ್ಯ ವಿಸ್ತರಿಸುವುದಾಗಿ ತಿಳಿಸಿದರು. ಪಂಚಾಯತಿ ಅಧಿಕಾರಿಗಳ ಸೇವಾ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಲು ನಿಗದಿತವಾಗಿ ಸಭೆಗಳನ್ನು ನಡೆಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ಸಚಿವರು ಸಂಘದ ಪದಾಧಿಕಾರಿಗಳಿಗೆ ತಿಳಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದಲ್ಲಿ, ಸರ್ಕಾರ ಅಧಿಕಾರಿಗಳ ಕಲ್ಯಾಣಕ್ಕಾಗಿ ಹೆಚ್ಚು ಆಸಕ್ತಿ ತೋರುವುದೆಂದು ಕಿವಿಮಾತು ಹೇಳಿದರು.

ಸಂಘದ ಬೇಡಿಕೆಗಳ ವಿಷಯದಲ್ಲಿ ಸಚಿವರು ದೃಢ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ತಿಂಗಳ 14ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಕೈ ಬಿಟ್ಟಿರುವುದಾಗಿ ತಿಳಿಸಿದರು.

ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್‌ ಹಾಗೂ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್‌ ಸಭೆಯಲ್ಲಿ ಹಾಜರಿದ್ದರು. ಸಂಘದ ರಾಜ್ಯಾಧ್ಯಕ್ಷ ರಾಜು ವಾರದ ಹಾಗೂ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಬಗ್ಗೆ ಸಚಿವರಿಗೆ ಮನದಟ್ಟು ಮಾಡಿಕೊಟ್ಟರು.



Join Whatsapp