ಉದ್ಧವ್ ಠಾಕ್ರೆಗೆ ಕಪಾಳಮೋಕ್ಷದ ಹೇಳಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರಾಣೆ ವಿರುದ್ಧ ಎಫ್.ಐ.ಆರ್

Prasthutha|

ಮುಂಬೈ: ಕೇಂದ್ರ ಸಚಿವರಾದ ನಾರಾಯಣ್ ರಾಣೆ ಅವರು ಭಾರತದ ಸ್ವಾತಂತ್ರ್ಯದ ವರ್ಷದ ಬಗ್ಗೆ ಅಜ್ಞಾನ ಹೊಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷ ಮಾಡುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆಯ ವಿರುದ್ಧ ಯುವಸೇನೆಯ ಕಾರ್ಯಕರ್ತರು ನೀಡಿದ್ದ ದೂರಿನನ್ವಯ ಸಚಿವರಾದ ರಾಣೆಯ ವಿರುದ್ಧ ಎಫ್.ಐ.ಆರ್ ದಾಖಲಾಗಿ ಬಂಧನ ಭೀತಿಯಲ್ಲಿದ್ದಾರೆ.

ಮಾತ್ರವಲ್ಲದೆ ರಾಣೆ ಅವರ ಹೇಳಿಕೆಯನ್ನು ವಿರೋಧಿಸಿ ಆಡಳಿತರೂಢ ಶಿವಸೇನೆಯ ಕಾರ್ಯಕರ್ತರು ಮುಂಬೈಯಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಿವಸೇನೆ – ಬಿಜೆಪಿ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.
ರಾಣೆ ಅವರ ಹೇಳಿಕೆಯನ್ನು ವಿರೋಧಿಸಿ ಆಕ್ರೋಶಿತ ಶಿವಸೇನೆಯ ಕಾರ್ಯಕರ್ತರು ಸೇನೆಯ ಧ್ವಜ ಹಿಡಿದು ರಾಣೆ ವಿರುದ್ಧ ಘೋಷಣೆ ಕೂಗಿ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದೆ. ಈ ಸಂದರ್ಭದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ಜಗಳ ಆರಂಭವಾಗಿ ಈ ವಿವಾದ ತಾರತಕ್ಕೇರಿದೆ. ಆಕ್ರೋಶಿತ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಶಿವಸೇನೆಯ ಕಾರ್ಯಕರ್ತರು ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಮಾತ್ರವಲ್ಲದೆ ಸೇನೆಯ ಕಾರ್ಯಕರ್ತರು ಇಂದು ಬೆಳಿಗ್ಗೆ ನಾಗಪುರದ ಬಿಜೆಪಿ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ರಾಣೆಯ ವಿರುದ್ಧ ನಾಸಿಕ್ ನಲ್ಲಿ ಎಫ್.ಐ.ಆರ್ ದಾಖಲಾಗಿದೆ ಮತ್ತು ಸಚಿವರ ಬಂಧನಕ್ಕೆ ಪೊಲೀಸರು ವಾರಂಟ್ ಜಾರಿಗೊಳಿಸಿದ್ದಾರೆ.

ಬಿಜೆಪಿ ಆಯೋಜಿಸಿದ್ದ ಜನ್ ಆಶೀರ್ವಾದ್ ಯಾತ್ರೆಯ ಭಾಗವಾಗಿ ರಾಯ್ ಘಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸಚಿವರಾದ ರಾಣೆ ಈ ರೀತಿಯ ಹೇಳಿಕೆ ನೀಡಿದ್ದರು. ಸ್ವಾತಂತ್ರ್ಯದ ಭಾಷಣದ ವೇಳೆಯಲ್ಲಿ ಮುಖ್ಯಮಂತ್ರಿ ಠಾಕ್ರೆ ಅವರು ಸ್ವಾತಂತ್ರ್ಯದ ವರ್ಷವನ್ನು ಮರೆತ ಹಿನ್ನೆಲೆಯಲ್ಲಿ ಅವರ ಸಹಾಯಕರ ನೆರವನ್ನು ಪಡೆದು ಭಾಷಣವನ್ನು ಮುಂದುವರಿಸಿದ್ದರು. ಈ ನಿಟ್ಟಿನಲ್ಲಿ ಸಚಿವ ರಾಣೆ ಅವರು ಮುಖ್ಯಮಂತ್ರಿ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ, ಪಕ್ಷದ ಮಾಜಿ ನಾಯಕರಾದ ರಾಣೆ ಅವರು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದೆ. ಶಿವಸೇನೆಯ ಮೂಲಕ ತನ್ನ ರಾಜಕೀಯ ಜೀವನವನ್ನು ಆರಂಭಿಸಿದ ರಾಣೆ ಅವರು ಆಂತರಿಕ ಕಲಹದ ಕಾರಣದಿಂದ 2005 ಶಿವಸೇನೆ ತೊರೆದು ಕಾಂಗ್ರೆಸ್ ಸೇರಿದ್ದರು. ನಂತರದಲ್ಲಿ ತಮ್ಮ ಪುತ್ರರಾದ ನಿಲೇಶ್ ಮತ್ತು ನಿತೀಶ್ ಅವರೊಂದಿಗೆ ಸೇರಿಕೊಂಡು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದ್ದರು. ಪ್ರಸಕ್ತ ಜುಲೈ ನಲ್ಲಿ ಮೋದಿ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿವಸೇನೆ ಸಂಸದ ವಿನಾಯಕ ರಾವುತ್ ಅವರು ರಾಣೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

- Advertisement -