ಬೃಹತ್ ಮೊತ್ತದ GIM ನ ಕಿರುಚಿತ್ರ ನಿರ್ಮಾಣಕ್ಕೆ ತಡೆಯೊಡ್ಡಿದ ಸಚಿವ ಮುರುಗೇಶ ನಿರಾಣಿ

Prasthutha|

ಬೆಂಗಳೂರು: ನವೆಂಬರ್ 2ರಿಂದ 4ರವರೆಗೆ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (GIM) ದಲ್ಲಿ ಪ್ರದರ್ಶಿಸಲು ₹4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಕಿರುಚಿತ್ರಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಯತ್ನಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಡೆಯೊಡ್ಡಿದ್ದಾರೆ.

- Advertisement -

ಅಧಿಕಾರಿಗಳ ಈ ಪ್ರಯತ್ನ ಕೈಗಾರಿಕಾ ಸಚಿವರ ಗಮನಕ್ಕೆ ಬರುತ್ತಿದ್ದಂತೆಯೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಪತ್ರ ಬರೆದ ಸಚಿವ ಮುರುಗೇಶ ನಿರಾಣಿ,  ಕಿರುಚಿತ್ರ ನಿರ್ಮಾಣಕ್ಕೆ ನಿಗದಿಪಡಿಸಿರುವ ಈ ಮೊತ್ತವು ತುಂಬಾ ಹೆಚ್ಚಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಇದು ಅನಗತ್ಯ ಮತ್ತು ಸೂಕ್ತವಲ್ಲ. ಇಲಾಖೆಯು ಇಂತಹ ಒಪ್ಪಂದ ಮಾಡಿಕೊಂಡಿದ್ದಲ್ಲಿ ಈ ಯೋಜನೆಯನ್ನು ರದ್ದು ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯದ ಲಭ್ಯತೆ ಮತ್ತಿತರ ಅಂಶಗಳನ್ನು ವಿವರಿಸುವ ಕಿರುಚಿತ್ರ ನಿರ್ಮಿಸಿ, GIM ನಲ್ಲಿ ಪ್ರದರ್ಶಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿತ್ತು. ₹4.5 ಕೋಟಿ ವೆಚ್ಚದಲ್ಲಿ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ 5 ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು.

- Advertisement -

ದುಬಾರಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸುವ ಪ್ರಸ್ತಾವದ ಕುರಿತು ಕೈಗಾರಿಕಾ ಸಚಿವರಿಗೆ ಮಾಹಿತಿ ನೀಡದೆ,  ತಮ್ಮ ಹಂತದಲ್ಲೇ ನಿರ್ಧಾರ ಕೈಗೊಂಡ ಅಧಿಕಾರಿಗಳು, ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆಯ್ಕೆಮಾಡಿ, ಖಾಸಗಿ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಂಡಿದ್ದರು. ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳ ಜತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕಿರುಚಿತ್ರ ನಿರ್ಮಿಸುವ ಯೋಜನೆ ಕೈಬಿಡುವಂತೆ ಕೈಗಾರಿಕಾ ಸಚಿವರು ಬರೆದ ಪತ್ರ ಶುಕ್ರವಾರ ಸಂಜೆ ನನಗೆ ತಲುಪಿದೆ. ಶನಿವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ರಜೆಗಳಿವೆ. ಕಿರುಚಿತ್ರ ನಿರ್ಮಾಣ ಯೋಜನೆ ರದ್ದುಗೊಳಿಸಿ ಮಂಗಳವಾರವೇ ಆದೇಶ ಹೊರಡಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ತಿಳಿಸಿದರು.

ಸರ್ಕಾರಿ ಶಾಲೆಗಳ ನಿರ್ವಹಣೆಗೆ ಅನುದಾನ ಕಡಿತಗೊಳಿಸಿ ಪೋಷಕರಿಂದ ಹಣ ವಸೂಲಿ ಮಾಡಲು ಹೊರಟಿರುವ ಸರ್ಕಾರ , ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕೆ ₹4.5 ಕೋಟಿ ವೆಚ್ಚ ಮಾಡಲು ಹೊರಟಿದೆ. ಸಚಿವರ ಗಮನಕ್ಕೆ ಬಾರದಂತೆ ಕೈಗೊಂಡಿರುವ ಈ  ನಿರ್ಧಾರದ ಹಿಂದೆ ಹಣ ಲೂಟಿಯ ಹುನ್ನಾರವಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ ಎಸ್) ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಆರೋಪಿಸಿದ್ದಾರೆ.

ಲೂಟಿ ಮಾಡುವುದಕ್ಕಾಗಿಯೇ GIM ನಡೆಸಲಾಗುತ್ತಿದೆ. ಕಿರುಚಿತ್ರ ನಿರ್ಮಾಣದ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು. ಈವರೆಗೆ ನಡೆಸಿರುವ GIM ಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



Join Whatsapp