ಬೆಂಗಳೂರು: ಮಂಗಳೂರು ನಗರದ ಉಳ್ಳಾಲ ನಗರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 8 ವಲಯಗಳಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ಮತ್ತು ತ್ಯಾಜ್ಯ ಗುಂಡಿಗಳು ಒಳಗೊಂಡಂತೆ ಒಳಚರಂಡಿ ವ್ಯವಸ್ಥೆ ನಿರ್ಮಿಸುವ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ನೇತೃತ್ವದ ನಿಯೋಗ ಉಳ್ಳಾಲಕ್ಕೆ ಭೇಟಿ ನೀಡಲು ನಿರ್ಧರಿಸಿದೆ.
ಮಂಗಳೂರು ನಗರದ ಉಳ್ಳಾಲ ನಗರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 8 ವಲಯಗಳಲ್ಲಿ ಮಲೀನ ನೀರು ಶುದ್ಧೀಕರಣ ಘಟಕ ಮತ್ತು ತ್ಯಾಜ್ಯ ಗುಂಡಿಗಳು ಒಳಗೊಂಡಂತೆ ಒಳಚರಂಡಿ ವ್ಯವಸ್ಥೆ ನಿರ್ಮಿಸುವ ವ್ಯವಸ್ಥೆ ಅವೈಜ್ಞಾನಿಕ ವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್ ಮತ್ತು ಇತರೆ ಸದಸ್ಯರು ಇತ್ತೀಚೆಗೆ ನಿಯಮ 330ರ ಅಡಿಯಲ್ಲಿ ಚರ್ಚೆಗೆ ತಂದಾಗ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ (ಬೈರತಿ) ಅವರು ಉತ್ತರ ನೀಡಿದ್ದರು.
ಆದರೆ, ಇದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದು ಸದಸ್ಯರು ಪಟ್ಟ ಹಿಡಿದಿದ್ದರು. ಅದರಂತೆ ಗುರುವಾರ ಮಧ್ಯಾಹ್ನ ವಿಕಾಸ ಸೌಧದ ಸಮಿತಿ ಕೊಠಡಿಯಲ್ಲಿ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.’
ವಿಧಾನ ಸಭಾ ಸದಸ್ಯರಾದ ಯು.ಟಿ.ಖಾದರ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಕೆ. ಎ.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಶತಮಾನದಲ್ಲಿ ಎಸ್. ಎಲ್. ಭೋಜೆ ಗೌಡ, ನರಸಿಂಹ ನಾಯಕ್, ರಮೇಶ್ ಗೌಡ, ನಜೀರ್ ಅಹ್ಮದ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಎನ.ಜಯರಾಂ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಟಿ.ರೇಜು, ಮುಖ್ಯ ಅಭಿಯಂತರಾದ ಸಿದ್ದ ನಾಯಕ್, ಶ್ರೀಕೇಶವ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿವೇಶನ ಮುಗಿದ ನಂತರ ಯಾವುದಾದರೊಂದು ದಿನ ಉಳ್ಳಾಲಕ್ಕೆ ಭೇಟಿ ನೀಡಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳ ವೀಕ್ಷಣೆ ಮಾಡಿ ಅದರ ಸಾಧಕ-ಭಾದಕಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆಯನ್ನು ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಸವರಾಜ ತಿಳಿಸಿದರು.