ರಣಜಿ ಟ್ರೋಫಿ: ಶತಕ ದಾಖಲಿಸಿದ ಸಚಿವ !

Prasthutha|

ರಣಜಿ ಟ್ರೋಫಿ ಪಂದ್ಯಾವಳಿಯ ಬಂಗಾಳ ಮತ್ತು ಜಾರ್ಖಂಡ್ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಬಂಗಾಳ ತಂಡ ಸೆಮಿ ಫೈನಲ್ ಪ್ರವೇಶಿಸಿದೆ.

- Advertisement -

9 ಮಂದಿ ಬ್ಯಾಟ್ಸ್‌ಮನ್ ಗಳ ದಾಖಲೆಯ ಅರ್ಧಶತಕ ನೆರವಿನಿಂದ ಬಂಗಾಳ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 773 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ ಬೆಟ್ಟದಷ್ಟು ಮೊತ್ತವನ್ನು ಬೆನ್ನಟ್ಟಿದ ಜಾರ್ಖಂಡ್, ಮೊದಲ ಇನ್ನಿಂಗ್ಸ್‌ನಲ್ಲಿ 298 ರನ್’ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು.

475 ರನ್‌ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಬಂಗಾಳದ ಪರ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವರೂ ಆಗಿರುವ ಮನೋಜ್‌ ತಿವಾರಿ ಆಕರ್ಷಕ ಶತಕ ದಾಖಲಿಸಿ ಮಿಂಚಿದರು.

- Advertisement -

ತಂಡವು 4 ವಿಕೆಟ್ ನಷ್ಟದಲ್ಲಿ 129ರನ್ ಗಳಿಸಿದ್ದ ವೇಳೆ ಕ್ರೀಸ್‌ಗಿಳಿದ ತಿವಾರಿ, 185 ಎಸೆತಗಳನ್ನು ಎದುರಿಸಿ, 19 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 136 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾದರು. ಮೊದಲನೇ ಇನ್ನಿಂಗ್ಸ್ ನಲ್ಲೂ ಮನೋಜ್ ತಿವಾರಿ ಆಕರ್ಷಕ ಅರ್ಧಶತಕ [73] ದಾಖಲಿಸಿದ್ದರು.

ಪಶ್ಚಿಮ ಬಂಗಾಳದ ವಿಧಾನಸಭೆಗೆ ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿಬ್’ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಿವಾರಿ, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ರವೀಂದ್ರನಾಥ್ ಚಕ್ರವರ್ತಿ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಮಮತಾ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದಾರೆ.

ಅಭಿಮನ್ಯು ಈಶ್ವರನ್ ಸಾರಥ್ಯದ ಬಂಗಾಳ ತಂಡವು 7 ವಿಕೆಟ್‌ ನಷ್ಟದಲ್ಲಿ 318 ರನ್‌ ಗಳಿಸಿದ್ದ ವೇಳೆ ದ್ವಿತೀಯ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಬಂಗಾಳ ಪಡೆ ಮುಂಬೈ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ತಂಡಗಳ ಜೊತೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಸೆಮಿಫೈನಲ್‌ ಪಂದ್ಯಗಳು ಜೂನ್‌ 14 ರಿಂದ 18ರ ವರೆಗೆ ನಡೆಯಲಿದ್ದು, ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಬಂಗಾಳ ಹಾಗೂ ಮಧ್ಯಪ್ರದೇಶ ಹಾಗೂ ಜಸ್ಟ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಸೆಣಸಲಿವೆ. ಫೈನಲ್‌ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 22ರಿಂದ 26ರ ವರೆಗೆ ನಡೆಯಲಿದೆ.

Join Whatsapp