ಎಸ್ಸಿ – ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್ ನ 22 ಕೋಟಿ ಹಗರಣದಲ್ಲಿ ಮಂತ್ರಿ ಅಶ್ವತ್ಥನಾರಾಯಣ ನೇರ ಕೈವಾಡ: ಮೋಹನ್ ದಾಸರಿ ಆರೋಪ

Prasthutha|

ಬೆಂಗಳೂರು: ರಾಜ್ಯದ ಎಲ್ಲ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್ ಗಳನ್ನು ಖರೀದಿಸಿ ವಿತರಿಸುವ ಟೆಂಡರ್ ನಲ್ಲಿ ಭಾರಿ ಗೋಲ್ ಮಾಲ್ ನಡೆದಿರುವುದರ ಹಿಂದೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿ ಸಿ. ಎನ್. ಅಶ್ವತ್ಥ್ ನಾರಾಯಣ ನೇರ ಹಸ್ತಕ್ಷೇಪ ಮತ್ತು ಕೈವಾಡ ಇದೆ ಎಂದು ಆಮ್ ಆದ್ಮಿ ಪಕ್ಷ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆರೋಪ ಮಾಡಿದೆ.

- Advertisement -

ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿ ವಿವರ ನೀಡಿದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ರಾಜ್ಯ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಇಲಾಖೆಯ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಈ ಟೂಲ್ ಕಿಟ್ ಟೆಂಡರ್ ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನೀಡಿರುವ ನಕಲಿ ದಾಖಲೆಗಳನ್ನು ನೀಡಿ ತಾಂತ್ರಿಕ ಅನುಮೋದನೆಯನ್ನು ಪಡೆದುಕೊಂಡಿದೆ. ಮಂತ್ರಿಗಳ ಒತ್ತಡ ಹಾಗೂ ನೇರ ಹಸ್ತಕ್ಷೇಪ ದಿಂದಾಗಿ ಬೋಗಸ್ ಕಂಪನಿಯೊಂದು 22 ಕೋಟಿ ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರದ 40 % ಕಮಿಷನ್ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮೋಹನ್ ದಾಸರಿ ತಿಳಿಸಿದರು.

ಮೊದಲ ಬಾರಿ ನಡೆದ ಟೆಂಡರ್ ನಲ್ಲಿ ಇದೇ ಕಂಪನಿಯು ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ಮರು ಟೆಂಡರ್ ನಲ್ಲಿ ಈ ಕಂಪನಿಗೆ ಅನುವು ಮಾಡಿಕೊಡಲಾಗಿದೆ. ಇದರ ಹಿಂದೆಯೂ ಇಲಾಖೆಯ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.

- Advertisement -

ಕಂಪೆನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ, ಹಾಗೂ 11 ಕೋಟಿ ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವ ಹಾಗೆ ಸೃಷ್ಟಿಸಿರುವ ಜಿಎಸ್ ಟಿ ಬಿಲ್ ಗಳು ಸಂಪೂರ್ಣ ನಕಲಿಯಾಗಿವೆ. ಜಿ ಎಸ್ ಟಿ ಮಂಡಳಿಯವರು ಸಹ ಈ ಬಗ್ಗೆ ನಕಲಿ ಬಿಲ್ ಎಂದು ರುಜುವಾತು ಪಡಿಸಿದ್ದಾರೆ. ಆದರೂ ಸಹ ಇದೇ ಕಂಪನಿಗೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮಂತ್ರಿಗಳು ಕೋಟ್ಯಂತರ ರೂ. ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುವು ಮಾಡಿಕೊಟ್ಟಿರುವುದು ಇಲಾಖೆಯ ಅಧಿಕಾರಿಗಳು ಮತ್ತು ಮಂತ್ರಿಗಳು ಭ್ರಷ್ಟಾಚಾರ , ಸ್ವಜನಪಕ್ಷಪಾತ ಮತ್ತು ಅಧಿಕಾರ ದುರ್ಬಳಕೆ ಮಾಡಿರುವುದು ಸಂಪೂರ್ಣವಾಗಿ ಎದ್ದು ಕಾಣುತ್ತದೆ.

ಕಳೆದ ವರ್ಷ 2021 ರ ಸೆಪ್ಟಂಬರ್ ತಿಂಗಳಲ್ಲಿನ ಮಂತ್ರಿ ಮಂಡಲ ಸಭೆಯಲ್ಲಿ ಈ ಸಾಮಗ್ರಿಗಳ ಪೂರೈಕೆಗೆ ಕೇವಲ 17 ಕೋಟಿಗಳು ಮೀಸಲಿಟ್ಟಿದ್ದರೂ ಸಹ ನಂತರ ನಡೆದ ಟೆಂಡರ್ ಗೋಲ್ ಮಾಲ್ ನಲ್ಲಿ ಈ ಮೊತ್ತ 22 ಕೋಟಿಗೆ ಹೆಚ್ಚಾಗಿರುವುದರ ಹಿಂದೆಯೂ ಸಹ ಮಂತ್ರಿಗಳ ಪರಮ ಭ್ರಷ್ಟಾಚಾರ ಅಡಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.

ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡ ಗಳ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಈ ರೀತಿಯ ಯೋಜನೆಗಳಲ್ಲಿಯೂ ಸಹ ಬಿಜೆಪಿ ಸರ್ಕಾರವು ತನ್ನ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಚಾಚುತ್ತಿರುವುದು ತೀರಾ ದುರದೃಷ್ಟಕರ ಸಂಗತಿ.
ಈ ಕೂಡಲೇ ಇಂಟಲೆಕ್ ಸಿಸ್ಟಮ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರಿಗೆ ನೀಡಿರುವ ಅನುಮೋದನೆಯನ್ನು ರದ್ದುಗೊಳಿಸಬೇಕು ಹಾಗೂ ಪೂರೈಕೆ ಕಂಪೆನಿ ,ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿ ಅಶ್ವತ್ಥನಾರಾಯಣ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ಹಿರಿಯ ಮುಖಂಡರು ಹಾಗೂ ಕೋಲಾರದ ಮಾಜಿ ಸಂಸದ ಡಾ.ವೆಂಕಟೇಶ್ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲವಾದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಮಂತ್ರಿ ಅಶ್ವತ್ಥನಾರಾಯಣ ಮನೆ ಮುಂದೆ ವಿದ್ಯಾರ್ಥಿಗಳ ಜೊತೆಗೆ ಆಮ್ ಆದ್ಮಿ ಪಕ್ಷವು ಬೃಹತ್ ಮಟ್ಟದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು , ಉಷಾ ಮೋಹನ್ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.



Join Whatsapp