ಸಮಸ್ಯೆಗಳ ಬಗ್ಗೆ ಮಾತ್ರವೇ ಮಾಧ್ಯಮದವರು ಬರೆಯುತ್ತಾರೆ ಎಂದ ಸಚಿವರು
ಸುಳ್ಯ: ಮಳೆ ಹಾನಿ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಸಚಿವ ಎಸ್. ಅಂಗಾರ ಕಿಡಿಕಾರಿದ್ದಾರೆ.
ಸಮಸ್ಯೆಗಳ ಬಗ್ಗೆ ಮಾತ್ರವೇ ಮಾಧ್ಯಮದವರು ಬರೆಯುತ್ತಾರೆ. ಆದರೆ ನಾವು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಅಪಪ್ರಚಾರ ಮಾಡುವವರು ಇದ್ದಾರೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೂ ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ. ಸಮಸ್ಯೆಗಳ ಬಗ್ಗೆ ಮಾತ್ರವೇ ಬರೆಯುತ್ತಾರೆ. ಆದ ಕೆಲಸಗಳ ಬಗ್ಗೆ ತಿಳಿಸುವ ಕೆಲಸ ಮಾಧ್ಯಮಗಳು ಮಾಡುತ್ತಿಲ್ಲ ಎಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಸಚಿವ ಅಂಗಾರ ಹೇಳಿದರು.
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಉಪ್ಪುಗಳದಲ್ಲಿ ಶೀಘ್ರ ಸೇತುವೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಟ್ಟಿನಿಂದಲೇ ಹೇಳಿದರು.
ಉಪ್ಪುಗಳದಲ್ಲಿ ಸೇತುವೆ ಸಮಸ್ಯೆಗಳ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.