ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನಸುಕಿನ ಜಾವ 2.50ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ.
ಈ ಘಟನೆ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿದ್ದ ಜನರಲ್ಲಿ ಆತಂಕ ಮೂಡಿಸಿದೆ. ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಮಧ್ಯರಾತ್ರಿ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.