►ಐದು ವರ್ಷಗಳಲ್ಲಿ ಸೇನಾಪಡೆಯ 45 ವಿಮಾನ ಅಪಘಾತ, 42 ರಕ್ಷಣಾ ಸಿಬ್ಬಂದಿ ಸಾವು
ನವದೆಹಲಿ: ಭಾರತೀಯ ವಾಯುಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರ್ಮರ್ನಲ್ಲಿ ಗುರುವಾರ ರಾತ್ರಿ 9.10 ಕ್ಕೆ ನಡೆದಿದೆ.
ಎರಡು ಸೀಟಿನ ಮಿಗ್–21 ತರಬೇತಿ ವಿಮಾನವು ಉತರ್ಲೈ ವಾಯುನೆಲೆಯಿಂದ ಹೊರಟಿದ್ದು, ಈ ಸಂದರ್ಭ ಅಪಘಾತ ಸಂಭವಿಸಿದೆ, ಇದರಲ್ಲಿ ಇಬ್ಬರೂ ಪೈಲಟ್ ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಐಎಎಫ್ ತಿಳಿಸಿದೆ. ಮೃತಪಟ್ಟ ಇಬ್ಬರು ಪೈಲಟ್ ಗಳ ಹೆಸರನ್ನು ಐಎಎಫ್ ಇನ್ನೂ ಬಹಿರಂಗಪಡಿಸಿಲ್ಲ.
ಅಪಘಾತ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಇಬ್ಬರು ಪೈಲಟ್ ಗಳ ಸಾವಿನ ಬಗ್ಗೆ ಸಿಂಗ್ ಟ್ವೀಟ್ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಬಾರ್ಮರ್ ಬಳಿ ಐಎಎಫ್ ನ ಮಿಗ್ -21 ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಏರ್ ವಾರಿಯರ್ ಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ದೇಶಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಬ್ಬರೂ ಪೈಲಟ್ ಗಳ ಸಾವಿಗೆ ಐಎಎಫ್ ವಿಷಾದ ವ್ಯಕ್ತಪಡಿಸಿದ್ದು, ದುಃಖಿತ ಕುಟುಂಬಗಳ ಜೊತೆ ಇರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ಅಪಘಾತದ ಕಾರಣವನ್ನು ಕಂಡುಹಿಡಿಯಲು ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಹೇಳಿದೆ.
ಈ ಅಪಘಾತವು ಮತ್ತೊಮ್ಮೆ ಹಳೆಯ ಸೋವಿಯತ್ ಮೂಲದ ಮಿಗ್-21 ವಿಮಾನಗಳ ಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದೆ. 1960 ದಶಕದ ಆರಂಭದಲ್ಲಿ ಭಾರತದ ವಾಯುಪಡೆ ಸೇರಿದ ಮಿಗ್ ವಿಮಾನಗಳಿಂದ ಈವರೆಗೆ 200 ಅಪಘಾತಗಳು ಸಂಭವಿಸಿದೆ.
ಮಿಗ್-21 ವಿಮಾನಗಳು ದೀರ್ಘಕಾಲದವರೆಗೆ ವಾಯುಪಡೆಯ ಮುಖ್ಯ ಆಧಾರವಾಗಿದ್ದವು. ಆದರೆ, ಈ ವಿಮಾನವು ಅತ್ಯಂತ ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿವೆ. ಕಳೆದ ಐದು ವರ್ಷಗಳಲ್ಲಿ ಮೂರೂ ಸೇನಾಪಡೆಗಳ ವಿಮಾನ ಮತ್ತು ಹೆಲಿಕಾಪ್ಟರ್ ಗಳ ಅಪಘಾತಗಳಲ್ಲಿ 42 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಾರ್ಚ್ ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಗೆ ತಿಳಿಸಿದ್ದರು. ಕಳೆದ ಐದು ವರ್ಷಗಳಲ್ಲಿ 45 ವಿಮಾನ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 29 ವಾಯುಪಡೆಯ ವಿಮಾನಗಳ ಅಪಘಾತಗಳಾಗಿವೆ.