ಅಮರಾವತಿಯಲ್ಲಿ ರಸಾಯನಶಾಸ್ತ್ರಜ್ಞ ಕೊಲೆ: NIA ತನಿಖೆಗೆ ವಹಿಸಿದ ಗೃಹ ಸಚಿವ ಅಮಿತ್ ಶಾ

Prasthutha|

ಪುಣೆ: ಇಲ್ಲಿನ ಅಮರಾವತಿಯಲ್ಲಿ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದ್ ರಾವ್ ಎಂಬಾತನನ್ನು ಇರಿದು ಕೊಲೆ ನಡೆಸಿದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಗಿದೆ ಎಂದು ಗೃಹ ಸಚಿವಾಲಯ ಶನಿವಾರ ತಿಳಿಸಿದೆ.

- Advertisement -

ಕೊಲೆಯ ಹಿಂದಿನ ಪಿತೂರಿ, ಸಂಶಯಾಸ್ಪದ ಸಂಘಟನೆಗಳ ಕೈವಾಡ ಮತ್ತು ಅಂತರಾಷ್ಟ್ರೀಯ ಸಂಪರ್ಕವನ್ನು ಬಹಿರಂಗಪಡಿಸುವ ಸಲುವಾಗಿ ಈ ಪ್ರಕರಣವನ್ನು NIA ತನಿಖೆ ನಡೆಸಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದ್ ರಾವ್ ಎಂಬವರು ಹತ್ಯೆಯಾಗಿದ್ದರು. ಇದೀಗ ಈ ಕೊಲೆಯ ಕಾರಣವನ್ನು ರಾಜಸ್ತಾನದ ಉದಯಪರದಲ್ಲಿ ನಡೆದ ಟೈಲರ್ ಹತ್ಯೆಗೆ ಹೋಲಿಕೆ ಮಾಡಲಾಗುತ್ತಿದೆ. ಟಿವಿ ಚರ್ಚೆಯೊಂದರಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾರಣಕ್ಕಾಗಿ ಉಮೇಶ್ ಎಂಬವರನ್ನು ಕೊಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಮುದಸ್ಸಿರ್ ಅಹಮದ್ ಶೇಖ್ ಇಬ್ರಾಹಿಂ, ಶಾರುಖ್ ಪಠಾಣ್ ಖಾನ್, ಅಬ್ದುಲ್ ತೌಫೀಕ್ ತಸ್ಲೀಮ್, ಶೋಬ್ ಖಾನ್ ಮತ್ತು ಅತೀಫ್ ರಶೀದ್ ಎಂಬವರನ್ನು ಮಹಾರಾಷ್ಟ್ರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.



Join Whatsapp