ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸುದ್ದಿ ಆಗಿದ್ದ ಮೀಟೂ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಕೇರಳದ ‘ಹೇಮಾ ಸಮಿತಿ ವರದಿ’ ಪ್ರಕಟ ಆದ ಬಳಿಕ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ.
ಫೈರ್ (ಫಿಲ್ಮ್ ಇಂಡಸ್ಟ್ರೀ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ನಟರು, ನಟಿಯರು, ಸಾಹಿತಿಗಳು, ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್ ಸಂಸ್ಥೆ ಮನವಿ ಮಾಡಿದೆ.
ವರದಿಯನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ವರದಿಯ ವಿವರನ್ನು ಶೀಘ್ರವೇ ಸಾರ್ವಜನಿಕಗೊಳಿಸಬೇಕು ಎಂದು ಫೈರ್ ಸಂಸ್ಥೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಪೂಜಾ ಗಾಂಧಿ, ಚೈತ್ರಾ ಆಚಾರ್, ನಿಶ್ವಿಕಾ ನಾಯ್ಡು, ನೀತು ಶೆಟ್ಟಿ, ಆಶಿಕಾ ರಂಗನಾಥ್, ನಟಿ ರಮ್ಯಾ, ಮಾನ್ವಿತಾ ಕಾಮತ್, ಐಂದ್ರಿತಾ ರೈ, ನಟ ಸುದೀಪ್, ವಿನಯ್ ರಾಜ್ಕುಮಾರ್ ಸೇರಿದಂತೆ ಹಲವರು ಸಹಿ ಮಾಡಿ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ‘ಫೈರ್’ ಸಂಸ್ಥೆಯ ಮೂಲಕ ಆ ದಿನಗಳು ಖ್ಯಾತಿಯ ಚೇತನ್ ಮನವಿ ಮಾಡಿದ್ದಾರೆ.