ನವದೆಹಲಿ: 2024ರ ಚುನಾವಣೆಯಲ್ಲಿ ಆಡಳಿತರೂಢ ಸರ್ಕಾರ ಸೋಲನುಭವಿಸಿದೆ ಎಂದು ಪಾಡ್ ಕಾಸ್ಟ್ ಒಂದರಲ್ಲಿ ಹೇಳಿದ್ದ ಸಿಇಒ ಮಾರ್ಕ್ ಜುಕರ್ ಬರ್ಗ್ ಹೇಳಿಕೆಗೆ ಮೆಟಾ ಇಂಡಿಯಾ ಕ್ಷಮೆ ಕೇಳಿದೆ. ಇದು ಉದ್ದೇಶಪೂರ್ಕವಾಗಿ ಹೇಳಿದ್ದಲ್ಲ ಎಂದು ಹೇಳಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್, ‘ಅಶ್ವಿನಿ ವೈಷ್ಣವ್ ಅವರೇ, 2024ರ ಚುನಾವಣೆಯಲ್ಲಿ ಆಡಳಿತರೂಢ ಪಕ್ಷಗಳು ಗೆಲುವು ಸಾಧಿಸಿಲ್ಲ ಎನ್ನುವ ಮಾರ್ಕ್ ಅವರ ಹೇಳಿಕೆಯು ಹಲವು ದೇಶಗಳಲ್ಲಿ ನಿಜ. ಆದರೆ ಭಾರತದಲ್ಲಲ್ಲ’ ಎಂದು ಹೇಳಿದ್ದಾರೆ.
‘ಉದ್ದೇಶಪೂರ್ವಕವಲ್ಲದ ಈ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಮೆಟಾಗೆ ಭಾರತ ಯಾವಾಗಲೂ ಅತ್ಯಂತ ಪ್ರಮುಖ ದೇಶ. ನಾವು ಅದರ ಭವಿಷ್ಯದ ನಾವಿನ್ಯತೆಯ ಭಾಗವಾಗಿರಲು ಬಯಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.ಈ ಹಿಂದೆ ಕೇಂದ್ರ ಮಾಹಿತಿ, ಪ್ರಸಾರ ಹಾಗೂ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಜೋ ರೋಗನ್ ಪಾಡ್ ಕಾಸ್ಟ್ ನಲ್ಲಿ ಜುಕರ್ ಬರ್ಗ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು. ‘2024 ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಅಧಿಕಾರದಲ್ಲಿರುವ ಹೆಚ್ಚಿನ ಸರ್ಕಾರಗಳು ಕೋವಿಡ್ ನಂತರ ಸೋತಿವೆ ಎನ್ನುವ ಜುಕರ್ ಬರ್ಗ್ ಹೇಳಿಕೆಯು ವಾಸ್ತವಿಕವಾಗಿಲ್ಲ’ ಎಂದು ಹೇಳಿದ್ದರು.