ಬೆಂಗಳೂರು : ದೇಶದ್ರೋಹ ಕೇಸು ಹಾಕುವ ಎಚ್ಚರಿಕೆ ನಡುವೆಯೂ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರು ಕನ್ನಡಿಗನ ಮೇಲೆ ದೌರ್ಜನ್ಯ ಎಸಗಿ ಪುಂಡತನ ಮೆರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಪರ ಸಂಘಟನೆ ಸದಸ್ಯನನ್ನು ಕೂಡಿ ಹಾಕಿ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕನ್ನಡಪರ ಸಂಘಟನೆಯ ಮುಖಂಡನಾಗಿರುವ ಶಿವಕುಮಾರ್ ನಾಯ್ಕ ಹಲ್ಲೆಗೆ ಒಳಗಾದವರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ಶಿವಕುಮಾರ್ ನಾಯ್ಕ ಮತ್ತು ಬೆಂಬಲಿಗರು ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಕೆಲವು ಕನ್ನಡ ಪರ ಸಂಘಟನೆಗಳ ಮೂಲಕ ಮಹಾರಾಷ್ಟ್ರಕ್ಕೆ ತೆರಳಿದ್ದರು. ಪ್ರತಿಭಟನೆ ನಡೆಸುವ ಮುನ್ನ ಲಾಡ್ಜ್ ನಲ್ಲಿ ತಂಗಿದ್ದ ಶಿವಕುಮಾರ್ ನಾಯ್ಕನನ್ನು ರೂಮ್ನಲ್ಲಿ ಕೂಡಿ ಹಾಕಿದ್ದಾರೆ. ಅಮೇಲೆ ಕ್ಷಮೆ ಕೇಳುವಂತೆ ಒತ್ತಾಯಿಸಿ ಬಹಿರಂಗವಾಗಿ ಹಲ್ಲೆ ಮಾಡಿದ್ದಾರೆ. ಕ್ಷಮೆ ಕೇಳಿದರೂ ಬಿಡದೇ ಎಂಇಎಸ್ ಪುಂಡರು ಹಲ್ಲೆ ಮಾಡಿ, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದಾರೆ.
ಒಂಟಿಯಾಗಿ ಸಿಕ್ಕಿದ ಕನ್ನಡ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದು, ಈ ಘಟನೆ ಸಂಬಂಧ ಕನ್ನಡರಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನ್ನಡಿಗರನ್ನು ಅನವಶ್ಯಕವಾಗಿ ಕೆಣಕಿದರೆ ಸುಮ್ಮನೆ ಕೂರಲ್ಲ. ಏಕಾಂಗಿಯಾಗಿ ಸಿಕ್ಕಿದ ಎಂಬ ಕಾರಣಕ್ಕೆ ಕನ್ನಡ ಪರ ಸಂಘಟನೆ ಕಾರ್ಯಕರ್ತನನ್ನು ಕೂಡಿ ಹಾಕಿ ಹಲ್ಲೆ ಮಾಡುವುದು ತಪ್ಪು. ಬೆಳಗಾವಿ ವಿಚಾರದಲ್ಲಿ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬ್ಯಾನ್ ಮಾಡಬೇಕು. ಮಾತ್ರವಲ್ಲ ಹಲ್ಲೆ ಮಾಡಿರುವ ಪುಂಡರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕನ್ನಡ ಪರ ಸಂಘಟನೆ ಹೋರಾಟಗಾರ ಯತಿರಾಜ್ ಆಗ್ರಹಿಸಿದ್ದಾರೆ.