ಮಾನಸಿಕ, ದೈಹಿಕ ಆರೋಗ್ಯ ಬಹುಮುಖ್ಯ: ಜಿಪಂ ಸಿಇಒ ಡಾ.ಕುಮಾರ್

Prasthutha|

ಮಂಗಳೂರು: ಮನಸ್ಸನ್ನು ಸದಾ ಸ್ಥಿಮಿತದಲ್ಲಿಟ್ಟುಕೊಳ್ಳಬೇಕು ಹಾಗೂ ಕಣ್ಣನ್ನು ಸದಾ ರಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸಲಹೆ ನೀಡಿದ್ದಾರೆ.
ಅವರು ಗುರುವಾರ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾದ 23ನೇ ವಿಶ್ವ ದೃಷ್ಟಿ ದಿನ ಹಾಗೂ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ಮನುಷ್ಯನಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹುಮುಖ್ಯ. ಅವುಗಳು ಸಮತೋಲನದಲ್ಲಿದ್ದರೆ ಮನುಷ್ಯ ನೆಮ್ಮದಿಯಾಗಿ ಬಾಳ್ವೆ ಮಾಡಬಹುದು. ಆದ್ದರಿಂದ ನಾವು ಕೇವಲ ಬಾಹ್ಯ ರಚನೆಗೆ ಪ್ರಾಮುಖ್ಯತೆ ನೀಡದೆ ಆಂತರಿಕ ಸೌಂದರ್ಯಕ್ಕೂ ಪ್ರಾಮುಖ್ಯತೆ ನೀಡಿದರೆ ಮಾತ್ರ ನಾವು ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ. ಆದ್ದರಿಂದ ಕಣ್ಣು ಮತ್ತು ಮನಸ್ಸನ್ನು ರಕ್ಷಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ. ಮಾತನಾಡಿ, ನಮ್ಮ ಪರಿಸರದಲ್ಲಿರುವ ಜನರು ಒತ್ತಡಗಳು ಹಾಗೂ ಇತರೆ ಕಾರಣಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಿದ್ದರೆ ಅಂತಹವರಿಗೆ ಅಗತ್ಯವಿರುವ ಚಿಕಿತ್ಸೆ ಕೊಡಿಸಿ, ಆ ಮೂಲಕ ಅವರಿಗೆ ಹೊಸ ಜೀವನ ಆರಂಭಿಸಲು ನೆರವಾಗುವಂತೆ ಕರೆ ನೀಡಿದರು.

- Advertisement -

ಮಾನಸಿಕ ಅಸ್ವಸ್ಥತೆಗೊಳಗಾದವರು ಕಂಡುಬಂದರೆ ಅವರನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು, ಅಂತಹವರ ಆರೋಗ್ಯ ಹಾಗೂ ಅವರ ಆಸ್ತಿ ರಕ್ಷಣೆಗೆ ಕಾನೂನಿನಲ್ಲಿ ಅವಕಾಶಗಳಿವೆ. ಇಂತಹ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಆ ಮೂಲಕ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪಭೋವಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ವೆನ್ ಲಾಕ್ ಆಸ್ಪತ್ರೆಯ ಹಿರಿಯ ನೇತ್ರ ತಜ್ಞರಾದ ಡಾ.ಸೌಮ್ಯ, ಮಾನಸಿಕ ರೋಗ ತಜ್ಞರಾದ ಡಾ.ಸುಪ್ರೀತ ಮತ್ತು ವಕೀಲರಾದ ಶುಕರಾಜ್ ಎಸ್.ಕೊಟ್ಟಾರಿ ವೇದಿಕೆಯಲ್ಲಿದ್ದರು.

Join Whatsapp