ಮಂಗಳೂರು: 143 ವಿಪಕ್ಷ ಸಂಸದರನ್ನು ಅಮಾನತುಗೊಳಿಸಿರುವ ನಿರ್ಧಾರ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ವಿಪಕ್ಷಗಳ ಸಂಸದರ ಅಮಾನತು ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ ನಡೆಸಿದೆ. ಈ ವೇಳೆ ಮಾತನಾಡಿದ ಅನ್ವರ್ ಸಾದತ್, ಒಂದು ರಾಷ್ಟ್ರ, ಒಂದೇ ಪಕ್ಷ ಎಂಬ ಅಜೆಂಡಾ ಜಾರಿಗೊಳಿಸುವ ಭಾಗವಾಗಿ ಮೊದಲ ಹಂತದಲ್ಲಿ ವಿಪಕ್ಷ ಸಂಸದರ ಸಾಮೂಹಿಕ ಅಮಾನತು ಮಾಡಲಾಗಿದೆ ಎಂದು ಅವರು ದೂರಿದರು.
ಸಂವಿಧಾನ ಮೌಲ್ಯವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗಾಳಿಗೆ ತೂರಿದೆ, ಸರ್ವಾಧಿಕಾರಿ, ನಿರಂಕುಶವಾದಿ ಆಡಳಿತ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಪ್ರತಾಪ್ ಸಿಂಹ ಅವರ ಬಳಿ ಪಾಸ್ ಪಡೆದ ದುಷ್ಕರ್ಮಿಗಳು ಸಂಸತ್ ಭವನದ ಮೇಲೆ ದಾಳಿ ಮಾಡಿದ್ದು, ಈ ದೇಶದ ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ. ಈ ಬಗ್ಗೆ ಪ್ರಶ್ನೆ ಮಾಡುವುದು ಸಂವಿಧಾನದ ಹಕ್ಕು ಮತ್ತು ಕರ್ತವ್ಯವಾಗಿದೆ. 141 ಸಂಸದರನ್ನು ಅಮಾನತು ಮಾಡಿರುವುದು ದೇಶದ ಕರಾಳ ದಿನವಾಗಿದೆ ಎಂದು ಅವರು ಹೇಳಿದರು. ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ ಮಾತನಾಡಿ, ಸಂಸತ್ ನಲ್ಲಿ ವಿಪಕ್ಷಗಳನ್ನು ಇಲ್ಲದಾಗಿಸುವ ಮೋದಿ ಸರ್ಕಾರ ಮುಂದಕ್ಕೆ ಚುನಾವಣೆಯನ್ನೂ ಇಲ್ಲದಾಗಿಸುತ್ತದೆ ಎಂದು ನುಡಿದರು. ಸಂಸತ್ ಸದಸ್ಯರ ಅಮಾನತು ಬಗ್ಗೆ ವಿಪಕ್ಷಗಳು ಪ್ರತಿಭಟನೆ ಮಾಡುತ್ತಿಲ್ಲ, ಮೋದಿ ಸರ್ಕಾರದ ಸರ್ವಾಧಿಕಾರದ ಮುಂದೆ ವಿಪಕ್ಷಗಳು ಮಂಡಿಯೂರಿದೆ ಎಂದು ಅವರು ಹೇಳಿದರು.