ಮೇಕೆದಾಟು: ಖಂಡನಾ ನಿರ್ಣಯಕ್ಕೆ ಜೆಡಿಎಸ್ ಬೆಂಬಲ

Prasthutha|

ಬೆಂಗಳೂರು: ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಳ್ಳಲಾಗಿರುವ ವಿವಾದಾತ್ಮಕ ನಿರ್ಣಯಕ್ಕೆ ಪ್ರತಿಯಾಗಿ ರಾಜ್ಯ ವಿಧಾನಸಭೆಯಲ್ಲಿ ಕೈಗೊಂಡಿರುವ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

- Advertisement -


ವಿಧಾನಸೌಧ ಬಳಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು: ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡರಷ್ಟೇ ಸಾಲದು. ಮೊದಲು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಪಡೆದು ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯ ಮಾಡಿದರು.


ಇದು ನಮ್ಮ ಒಗ್ಗಟ್ಟು ಪ್ರದರ್ಶನದ ನಿರ್ಣಯ ಅಷ್ಟೇ. ಅದು ಈಗ ಆಗಿದೆ. ಆದರೆ ತಕ್ಷಣ ಬೇಕಿರುವುದು ಕೇಂದ್ರದ ಒಪ್ಪಿಗೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರಕಾರವಿದೆ. ಕೇಂದ್ರದ ಒಪ್ಪಿಗೆ ಪಡೆದುಕೊಳ್ಳಲು ರಾಜ್ಯ ಸರಕಾರ ಬದ್ಧತೆ ತೋರಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

- Advertisement -


ದೇವೇಗೌಡರ ಲೇಖನ ಪ್ರದರ್ಶಿಸಿದ ಮಾಜಿ ಸಿಎಂ
ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ. ನನ್ನ ಪ್ರಧಾನ ಸಂಪಾದಕತ್ವದಲ್ಲಿ ಪ್ರತಿ ತಿಂಗಳು ಪ್ರಕಟವಾಗುವ ‘ಜನತಾ ಪತ್ರಿಕೆ’ಯಲ್ಲಿ ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಲಾಗಿದೆ. ಈಗಾಗಲೇ ಕೇಂದ್ರದಲ್ಲಿ ಒಂದು ಸಭೆ ಮಾಡಿ ಕರ್ನಾಟಕವನ್ನು ಲೆಕ್ಕಕ್ಕೆ ಇಡದೇ ತೆಲಂಗಾಣ, ಆಂಧ್ರ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಮಾತ್ರ ನೀರು ಹಂಚಿಕೊಂಡಿವೆ. ಇದೇ ಕಾಣಕ್ಕಾಗಿಯೇ ನದಿ ಜೋಡಣೆ ವಿಚಾರದಲ್ಲಿ ಕನ್ನಡಿಗರು ತಬ್ಬಲಿಗಳು ಆಗುತ್ತಿದ್ದಾರೆ ಎಂದು ‘ ಜನತಾ ಪತ್ರಿಕೆ’ ಯಲ್ಲಿ ಸ್ವತಃ ದೇವೇಗೌಡರೇ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು ಗೌಡರು ‘ಜನತಾ ಪತ್ರಿಕೆ’ಯಲ್ಲಿ ಬರೆದಿರುವ ಲೇಖನವನ್ನು ಪ್ರದರ್ಶಿಸಿದರು.


ಕಾಂಗ್ರೆಸ್ ಪಕ್ಷಕ್ಕೆ ಚಾಟಿ:

ರಾಜ್ಯ ಸರಕಾರವು ಕೇಂದ್ರದ ಮನವೊಲಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಸರಕಾರ ಮಂಡಿಸಿದ ಈ ನಿರ್ಣಯಕ್ಕೆ ನಾವೆಲ್ಲಾ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದೇವೆ. ಪ್ರತಿಪಕ್ಷ ನಾಯಕರು ನಮ್ಮನ್ನೆಲ್ಲಾ ಕರೆದು ನಿರ್ಣಯದ ಕರಡು ಸಿದ್ಧ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದರೆ, ನೀರಾವರಿ ಬಗ್ಗೆ ಅಭಿಪ್ರಾಯ ಬೇಧ ಇರಬಾರದು. ನಮ್ಮ ನಿಲುವಿನಲ್ಲಿ ಗಟ್ಟಿತನ ಇಲ್ಲದಿರೋದ್ರಿಂದಲೇ ನಮ್ಮ ಬಗ್ಗೆ ಕೇಂದ್ರ ಸರಕಾರ ಮಲತಾಯಿ ದೋರಣೆ ತೋರುತ್ತಿದೆ ಎಂದು ಅವರು ಕಾಂಗ್ರೆಸ್ ನಿಲುವಿನ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು



Join Whatsapp