ರಾಮನಗರ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ 40 ಮುಖಂಡರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಸೋಮವಾರ ಶಿವಕುಮಾರ್ ಅವರ ಹುಟ್ಟೂರಾದ ದೊಡ್ಡಾಲಹಳ್ಳಿಯಿಂದ ಕನಕಪುರದವರೆಗೆ ಸುಮಾರು 15 ಕಿ.ಮೀ ದೂರದ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಾತನೂರು ಪೊಲೀಸ್ ಠಾಣೆಯಲ್ಲಿ ಇಂದು ಎಫ್‌ಐಆರ್ ದಾಖಲಾಗಿದೆ.
ಶಿವಕುಮಾರ್ ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಎಚ್ ಆಂಜನೇಯ ಮತ್ತು ಪಕ್ಷದ ಮುಖಂಡರಾದ- ನಾರಾಯಣಸ್ವಾಮಿ, ಮೋಟಮ್ಮ, ಪಿಟಿ ಪರಮೇಶ್ವರ ನಾಯ್ಕ್, ಧ್ರುವನಾರಾಯಣ ಸೇರಿದಂತೆ 40 ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.