ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ನಿರಂತರ ದೌರ್ಜನ್ಯ: ದೆಹಲಿ ಜಂತರ್ ಮಂತರ್ ನಲ್ಲಿ ಮೆಹಬೂಬ ಧರಣಿ

Prasthutha|

ನವದೆಹಲಿ: ಭದ್ರತಾ ಪಡೆಗಳು ಕಾಶ್ಮೀರ ಜನತೆಯ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ವಿರೋಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೋಮವಾರ ಜಂತರ್ ಮಂತರ್ ನಲ್ಲಿ ಧರಣಿ ನಡೆಸಿ ಅಮಾಯಕರ ಹತ್ಯೆಯನ್ನು ತಕ್ಷಣ ನಿಲ್ಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

- Advertisement -

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೇನೆ ಎಂದು ಮೆಹಬೂಬ ಮುಫ್ತಿ ತಿಳಿಸಿದ್ದಾರೆ. ಪ್ರತಿ ಬಾರಿಯೂ ಪ್ರತಿಭಟನೆಯನ್ನು ಆಯೋಜಿಸಿದಾಗ ತನ್ನನ್ನು ಗೃಹ ಬಂಧನದಲ್ಲಿರಿಸುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.

ಪ್ರತಿಭಟನೆಯ ವೇಳೆ ಜಂತರ್ ಮಂತರ್ ನಲ್ಲಿ ಪಿಡಿಪಿ ಕಾರ್ಯಕರ್ತರು ಮೆಹಬೂಬ ಅವರೊಂದಿಗೆ ಕೈಜೋಡಿಸಿದರು.

- Advertisement -

ಸದ್ಯ ಕಾಶ್ಮೀರದ ಜನತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅನುಮತಿಸದ ಪರಿಸ್ಥಿತಿಯಲ್ಲಿದ್ದು, ಇಡೀ ಕಾಶ್ಮೀರ ಜೈಲಾಗಿ ಪರಿವರ್ತನೆ ಆಗಿದೆ.. 2019 ರ ಆಗಸ್ಟ್ ನಿಂದ ಜನರನ್ನು ದಮನ ಮಾಡಲಾಗುತ್ತಿದೆ. ಕೆಲವು ಬಿಕರಿಯಾದ ಮಾಧ್ಯಮಗಳು ಕಾಶ್ಮೀರದ ಬಗ್ಗೆ ಕಪೋಕಲ್ಪಿತ ವರದಿಗಳನ್ನು ಬಿತ್ತರಿಸುತ್ತಿರುವುದು ಆಘಾತಕರವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆಗಸ್ಟ್ 2019 ರಲ್ಲಿ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು ಮತ್ತು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು.

ನಾಗಾಲ್ಯಾಂಡ್ ನಲ್ಲಿ 13 ನಾಗರಿಕರನ್ನು ಗುಂಡಿಕ್ಕಿ ಕೊಂದ ಘಟನೆಯಲ್ಲಿ ತ್ವರಿತವಾಗಿ ಎಫ್.ಐ.ಆರ್ ದಾಖಲಾಗಿದೆ. ಆದರೆ ಕಾಶ್ಮೀರದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರದ ಮೌನ ಖಂಡನೀಯ ಎಂದು ಅವರು ಈ ಸಂದರ್ಭಭದಲ್ಲಿ ತಿಳಿಸಿದರು.

Join Whatsapp