ಮೇಘಾಲಯ ಸಿಎಂ ಕಚೇರಿ ಮೇಲೆ ಕಲ್ಲು ತೂರಾಟ: ಭದ್ರತಾ ಸಿಬ್ಬಂದಿಗೆ ಗಾಯ

Prasthutha|

ಗುವಾಹಟಿ: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಗುವಾಹಟಿಯ ತುರಾ ನಗರದಲ್ಲಿರುವ ಕಚೇರಿ ಮೇಲೆ ಸೋಮವಾರ ಸಂಜೆ ದುಷ್ಕರ್ಮಿಗಳ ಗುಂಪು ಕಲ್ಲು ತೂರಾಟ ನಡೆಸಿದ್ದು, ಕನಿಷ್ಠ ಏಳು ಜನ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

- Advertisement -


ಕಲ್ಲು ತೂರಾಟದ ಸಂದರ್ಭದಲ್ಲಿ ಸಂಗ್ಮಾ ಹಾಗೂ ಕೆಲ ಸಚಿವರು ಕಚೇರಿಯಲ್ಲೇ ಇದ್ದರು. ಎಲ್ಲರೂ ಸುರಕ್ಷಿತವಾಗಿರುವುದಾಗಿ ಅಲ್ಲಿನ ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಘಟನೆಯ ಬಳಿಕ ತುರಾ ನಗರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು.


ಗಾರೊ ಹಿಲ್ಸ್ ಮೂಲದ ನಾಗರಿಕ ಸಮಾಜ ಗುಂಪು ತುರಾನಗರವನ್ನು ಚಳಿಗಾಲದ ರಾಜಧಾನಿ ಮಾಡಬೇಕೆಂದು ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಜನರು ಉಪವಾಸ ಸತ್ಯಾಗ್ರಹ ಕೂಡ ನಡೆಸುತ್ತಿದ್ದಾರೆ. 14 ದಿನಗಳ ಉಪವಾಸ ಸತ್ಯಾಗ್ರಹದ ನಂತರ, ಸಿಎಂ ಸಂಗ್ಮಾ ತಮ್ಮ ಕಚೇರಿಯಲ್ಲಿ ಧರಣಿನಿರತ ಗುಂಪುಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಇದರಲ್ಲಿ, ಅಚಿಕ್ ಮತ್ತು ಜಿಹೆಚ್ಎಸ್ಎಮ್ಸಿ ಸೇರಿದಂತೆ ಇತರ ಪ್ರತಿಭಟನಾ ಗುಂಪುಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಕಚೇರಿಯಲ್ಲಿ ಸಭೆ ನಡೆಯುತ್ತಿದ್ದಾಗ ಕಚೇರಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Join Whatsapp